ಮೊರ್ಬಿ ಸೇತುವೆ ದುರಂತ ದೇವರ ಆಟವೇ? ಭ್ರಷ್ಟಾಚಾರವೇ?: ಕಾಂಗ್ರೆಸ್ 

Prasthutha|

ನವದೆಹಲಿ: ಮೊರ್ಬಿ ಸೇತುವೆ ದುರಂತವನ್ನು ‘ದೇವರ ಆಟ’ ಎಂದು ಪ್ರಧಾನಿ ಮೋದಿಯವರು ಹೇಳಿರುವುದನ್ನು ಗೇಲಿ ಮಾಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು, ಇದು ದೇವರ ಆಟವೇ ? ಬಿಜೆಪಿಯ ಭ್ರಷ್ಟಾಚಾರದ ಮಾಟವೇ ? ಎಂದು ಲೇವಡಿ ಮಾಡಿದ್ದಾರೆ.

- Advertisement -

ಇದೀಗ ಬಂದ ಸುದ್ದಿಯಂತೆ ಸಾವಿನ ಸಂಖ್ಯೆ 141ಕ್ಕೆ ಏರಿಬಹುದು, ದುರಂತವನ್ನು ದೇವರ ಆಟ ಎನ್ನುತ್ತೀರಲ್ಲಾ, ಇದರಲ್ಲಿ ಬಿಜೆಪಿಯ ಭ್ರಷ್ಟಾಚಾರದ ಆಟವೇ ಕಾಣಿಸುತ್ತಿದೆ. ಬರೇ ಐದು ದಿನಗಳ ಹಿಂದಷ್ಟೆ ಹೊಸ ಸೇತುವೆಯನ್ನು ಸಂಚಾರಕ್ಕೆ ತೆರೆದಿಡಲಾಗಿತ್ತಲ್ಲವೇ ಪ್ರಧಾನಿಯವರೇ ? ಎಂದು ದಿಗ್ವಿಜಯ್ ಸಿಂಗ್ ಕುಟುಕಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್ ಅವರು ಮಾರ್ಚ್ 31, 2016ರಲ್ಲಿ ಕೊಲ್ಕತ್ತಾದ ಇನ್ನೂ ಕಟ್ಟುತ್ತಿದ್ದ ಮೇಲ್ಸೇತುವೆ ಬಿದ್ದಾಗ ಮಮತಾ ಬ್ಯಾನರ್ಜಿಯವರನ್ನು ಟ್ವೀಟ್ ನಲ್ಲಿ ಕಾಡಿದ ನಿಮಗೆ ಮೊರ್ಬಿಯ ಜನರ ಸಂಚಾರಕ್ಕೆ ತೆರೆದಿಟ್ಟ ಸೇತುವೆ ಕುಸಿದದ್ದು ದೇವರ ಆಟವೇ ಮೋದಿಯವರೇ ಎಂದು ಟ್ವೀಟ್ ಮೂಲಕ ಚುಚ್ಚಿದ್ದಾರೆ.

- Advertisement -

ಆರು ತಿಂಗಳಿಗೂ ಹೆಚ್ಚು ಕಾಲ ಕೋಟಿ ವ್ಯಯಿಸಿ ಮೊರ್ಬಿ ತೂಗು ಸೇತುವೆಯನ್ನು ಹೊಸತಾಗಿ ನಿರ್ಮಿಸಲಾಗಿದೆ. ಅಲ್ಲಿ 27 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಕಚ್ ನ ಬಿದ್ರಾದಲ್ಲಿ ಹೀಗೆಯೇ ಭ್ರಷ್ಟಾಚಾರದ ಕಾರಣಕ್ಕೆ ನರ್ಮದಾ ಕಾಲುವೆ ಒಡೆದು ಅಪಾರ ಹಾನಿ ಉಂಟಾಗಿತ್ತು ಎಂದು ಕಾಂಗ್ರೆಸ್ ನೆನಪಿಸಿದೆ.

ಎಂಟೊಂಬತ್ತು ವರ್ಷಗಳ ಕಾಲ ಕಟ್ಟಿದ ಭುಜ್ ನ ಮೇಲ್ಸೇತುವೆ ಉದ್ಘಾಟನೆಗೊಂಡ ವರ್ಷದೊಳಗೆ ಬಿದ್ದು ಜೀವಹಾನಿ ಮಾಡಿತ್ತು ಎನ್ನುವುದನ್ನೂ ಅವರು ನೆನಪಿಸಿದ್ದಾರೆ. 

ಭಾರತೀಯ ಸೇನೆ, ಭಾರತೀಯ ವಾಯು ಪಡೆ, ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಗೆ ಸಿಟ್- ವಿಶೇಷ ತನಿಖಾ ದಳ ರಚಿಸಿದ್ದಾರೆ.

ಭಾನುವಾರ ಸಂಜೆ ಬಿದ್ದ ಸೇತುವೆಯ ನಿರ್ವಹಣೆಯ ತಂಡದ ಮೇಲೆ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸುವುದಾಗಿ ಗುಜರಾತ್ ಗೃಹ ಮಂತ್ರಿ ಹರ್ಷ್ ಸಂಘ್ವಿ ತಿಳಿಸಿದ್ದಾರೆ. 135 ಶವಗಳನ್ನು ಹೊರ ತೆಗೆಯಲಾಗಿದ್ದು, 177 ಜನರನ್ನು ರಕ್ಷಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದಾರೆ.

ಮುನಿಸಿಪಲ್ ಕಮಿಶನರ್ ರಾಜ್ ಕುಮಾರ್ ಬೆನಿವಾಲ್ ನೇತೃತ್ವದಲ್ಲಿ ಸಿಟ್ ರಚಿಸಲಾಗಿದ್ದು, ಈ ವಿಶೇಷ ತನಿಖಾ ಪಡೆಯಲ್ಲಿ ರಸ್ತೆ ಮತ್ತು ಕಟ್ಟಡ ನಿರ್ಮಾಣ ಇಲಾಖೆಯ ಕಾರ್ಯದರ್ಶಿ ಸಂದೀಪ್ ವಾಸವ, ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಭಾಷ್ ತ್ರಿವೇದಿ ಹಾಗೂ ಇಬ್ಬರು ಸಂರಚನಾ ತಜ್ಞ ಎಂಜಿನಿಯರ್ ಗಳು ಸದಸ್ಯರಾಗಿರುತ್ತಾರೆ.

ಪಿಪಿಪಿ ಅಡಿ ಕಟ್ಟಿದ ಈ ತೂಗು ಸೇತುವೆ ನೋಡಲು ಕಟ್ಟಿದ ಕಂಟ್ರಾಕ್ಟರ್ ಪ್ರತಿಯೊಬ್ಬರಿಗೂ ರೂಪಾಯಿ 12ರಿಂದ 17 ವಸೂಲು ಮಾಡುತ್ತಿದ್ದ ಎನ್ನಲಾಗಿದೆ. ಮುನ್ಸಿಪಾಲಿಟಿಯ ಫಿಟ್ನೆಸ್ ಸರ್ಟಿಫಿಕೆಟ್ ಪಡೆಯದೆಯೇ ಚುನಾವಣಾ ಕಾಲದಲ್ಲಿ ತೂಗು ಸೇತುವೆಯನ್ನು ತರಾತುರಿಯಲ್ಲಿ ಜನ ಸಂಚಾರಕ್ಕೆ ತೆರವು ಮಾಡಲಾಗಿತ್ತು. ಭಾನುವಾರ ಹೊಸ ಸೇತುವೆ ನೋಡಲು ಜನ ಜಾತ್ರೆಯೇ ಸೇರಿದ್ದಾಗ ಈ ದುರಂತ ಸಂಭವಿಸಿತ್ತು.

Join Whatsapp