ಮಣಿಪುರ ಅತ್ಯಾಚಾರಿಗಳಿಗೆ ಹೂಹಾರ ಸಿದ್ಧವಾಗಿದೆಯೇ?

Prasthutha|

►ಎಫ್. ನುಸೈಬಾ ಕಲ್ಲಡ್ಕ

- Advertisement -

ಕುಕಿ ಸಮುದಾಯದ ಮಹಿಳೆಯರಿಬ್ಬರನ್ನು ವಿವಸ್ತ್ರವಾಗಿ ಮೆರವಣಿಗೆ ನಡೆಸಿ, ಅತ್ಯಾಚಾರಗೈದ ಅತ್ಯಂತ ಹೀನವಾದ  ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ವಿಶ್ವಗುರು ಆಗಲು ಹೊರಟ ಭಾರತ ಮತ್ತೊಮ್ಮೆ ಜಗತ್ತಿನ ಮುಂದೆ ಬೆತ್ತಲಾಗಿದೆ.  ಇಂತಹ ನೂರಾರು ಪೈಶಾಚಿಕ ಘಟನೆಗಳು ಮಣಿಪುರದಲ್ಲಿ ಜರುಗಿವೆ ಎಂದು ಸ್ವತಃ ಮಣಿಪುರದ ಮುಖ್ಯಮಂತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದಾದರೆ, ದೇಶದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ  ಸಾಕ್ಷಿಯಲ್ಲವೇ..?  ಸಂಪ್ರದಾಯವಾದಿ ಸಮಾಜದಲ್ಲಿ ಅತ್ಯಾಚಾರಕ್ಕೆ ಒಳಗಾದವರನ್ನು ಕಳಂಕಿತರೆಂಬ ದೃಷ್ಟಿಯಲ್ಲಿ ಕಾಣುವುದರಿಂದ ಮಣಿಪುರದಲ್ಲಿ ಇಂತಹ ಹಲವು ಅತ್ಯಾಚಾರ ಪ್ರಕರಣಗಳು ಗೌಪ್ಯವಾಗಿ ಉಳಿದು ಹೋಗಿದೆ ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡುತ್ತಿವೆ. ಕಾರ್ಗಿಲ್ ಯೋಧನ ಪತ್ನಿಯೂ ಸೇರಿದಂತೆ ಇಬ್ಬರು ಮಹಿಳೆಯರ  ಮೇಲೆ ನಡೆದ ಈ ಮೃಗೀಯ ವರ್ತನೆಯಿಂದ ಆ ಮಹಿಳೆಯರು ಅನುಭವಿಸಿದ ನಯಕ ಸದೃಶ ಯಾತನೆಯನ್ನು  ಊಹಿಸುವುದು  ಅಸಾಧ್ಯವಾಗಿದೆ.

 ಕಳೆದ ಎರಡೂವರೆ ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಒಂದಕ್ಷರವೂ ಮಾತಾಡದ ಪ್ರಧಾನಿ ಮೋದಿಯವರು  ಇದೀಗ  ಮಾತನಾಡಿದರೂ  ಮಖಭಂಗಕ್ಕೆ ಒಳಗಾಗಿದ್ದಾರೆ. ರಾಷ್ಟ್ರೀಯ ದೈನಿಕ’ ದಿ ಟೆಲಿಗ್ರಾಫ್’ ” 56 ಇಂಚಿನ ಚರ್ಮಕ್ಕೆ ನೋವು ಮತ್ತು ಅವಮಾನ ತಿಳಿಯಲು 79 ದಿನಗಳು ಬೇಕಾಯಿತು” ಎಂದು ತನ್ನ ಮುಖಪುಟದಲ್ಲೇ ಹೇಳಿಕೊಂಡಿದೆ.   ಸಾವಿರಾರು ಮಂದಿ  ಇದನ್ನು ಲೈಕ್ ಶೇರ್ ರಿಟ್ವೀಟ್  ಮಾಡುವುದರ ಮೂಲಕ ಪತ್ರಿಕೆಯನ್ನು ಶ್ಲಾಘಿಸಿದ್ದಾರೆ.  ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ದೇಶದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ  ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು  ಟ್ರೋಲ್ ಗಳಿಗೆ ಕಾರಣವಾಗುತ್ತಿದೆ.  

- Advertisement -

ವಿಶ್ವಗುರು ಆಗುವುದಕ್ಕೂ ಮೊದಲು ಮಹಿಳಾ ಸುರಕ್ಷತೆಗೆ ಆದ್ಯತೆಯನ್ನು ನೀಡಬೇಕಾಗಿದೆ. 2018 ರಲ್ಲಿ ಥಾಮ್ಸನ್ ರಾಯ್ಟರ್ಸ್ ಫೌಂಡೇಷನ್ ನಡೆಸಿದ ಸಮೀಕ್ಷೆ ಯು ಅಫ್ಘಾನಿಸ್ತಾನ ಹಾಗೂ ಸಿರಿಯಾಗಿಂತ ಭಾರತವು ಮಹಿಳೆಯರಿಗೆ ಅಪಾಯಕಾರಿ ಎಂದು ತಿಳಿಸಿದೆ. ಉನ್ನಾವೊ, ಹಾಥರಸ್, ಸಾಬಿಯ ಸೈಫ್ ಮುಂತಾದ ಅತ್ಯಾಚಾರ ಪ್ರಕರಣಗಳು ಜಾಗತಿಕವಾಗಿ ಸುದ್ದಿಯಾಗಿ ಭಾರತವು ವಿಶ್ವದ ಮುಂದೆ ತಲೆತಗ್ಗಿಸುವಂತಾಗಿದೆ. ನ್ಯಾಯದ ವಿಳಂಬೀಕರಣವು ಅತ್ಯಾಚಾರಿಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಶಿಕ್ಷೆಯ ಭೀತಿ ಇಲ್ಲದಿರುವುದು ಕಾಮುಖರಲ್ಲಿ ಬಂಢ ಧೈರ್ಯವನ್ನು ಹುಟ್ಟು ಹಾಕುತ್ತದೆ. ಇನ್ನು ಶಿಕ್ಷೆಯಾದರೂ ಅದು ಅರ್ಧಕ್ಕರ್ಧ ಪ್ರಕರಣಗಳಲ್ಲಿ ಮಾತ್ರ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಪ್ರಕಾರ  ಮಾತ್ರವಾಗಿದೆ. 2018 ರಲ್ಲಿ 485 ರೇಪ್ ಪ್ರಕರಣಗಳು ನಡೆದರೂ ಶಿಕ್ಷೆಯಾಗಿದ್ದು ಕೇವಲ 5 ಮಂದಿಗೆ ಮಾತ್ರ. 2019 ರಲ್ಲಿ ನಡೆದ 497 ಪ್ರಕರಣಗಳಲ್ಲಿ ಒಬ್ಬನೇ ಒಬ್ಬನಿಗೆ ಶಿಕ್ಷೆಯಾಗಿಲ್ಲ. 2020 ರಲ್ಲಿ 472 ಪ್ರಕರಣಗಳು ನಡೆದರೂ ಒಬ್ಬನಿಗಷ್ಟೇ ಶಿಕ್ಷೆಯಾಗಿದೆ.  N. C. R. B. ವರದಿ ಪ್ರಕಾರ ಹಲವು ಪ್ರಕರಣಗಳಲ್ಲಿ ರಾಜಕಾರಣಿಗಳೇ ಆರೋಪಿಗಳಾಗಿರುವುದರಿಂದ ನ್ಯಾಯವು ಮರೀಚಿಕೆಯಾಗುವುದರಲ್ಲಿ ಸಂಶಯವಿಲ್ಲ. ಗಣ್ಯ ವ್ಯಕ್ತಿಗಳ ಪ್ರಭಾವದಿಂದ FIR ದಾಖಲಾಗದೆ ಅಸಹಜ ಮರಣವೆಂದು ಕೇಸ್‍ಗಳು ಮುಚ್ಚಲ್ಪಡುತ್ತವೆ. ನಮ್ಮ ಕಾನೂನು ವ್ಯವಸ್ಥೆ ಇಷ್ಟೊಂದು ದುರ್ಬಲವಾಗಿರುವಾಗ ಈ ಅತ್ಯಾಚಾರಗಳಿಗೆ ಕಡಿವಾಣ ಬೀಳುವುದು ದೂರದ ಮಾತೇ ಸರಿ.  ಈ ದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ವರ್ಗಗಳ ಮೇಲಿನ ದೌರ್ಜನ್ಯ, ಮಹಿಳಾ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಅಮೇರಿಕಾದ ಮಾಜಿ ಅಧ್ಯಕ್ಷರು  ಪ್ರಧಾನಿ ಮೋದಿಯವರಿಗೆ ಉಪದೇಶಿಸುವಂತಾದರೆ, ಅಮೇರಿಕದ ಪತ್ರಕರ್ತರು ಮೋದಿಯನ್ನು ಪ್ರಶ್ನಿಸುವಂತಾದರೆ  ಈ ದೇಶದ ನ್ಯಾಯ  ವ್ಯವಸ್ಥೆ ಅದ್ಯಾವ ಹಂತಕ್ಕೆ ತಲುಪಿದೆ ಎಂದು ಊಹಿಸಬಹುದಾಗಿದೆ.  ಸ್ತ್ರೀ ಸಮಾನತೆ ಬಗೆಗಿನ ಪೊಳ್ಳು ವಾದಗಳು, ಮಾನವ ಹಕ್ಕುಗಳ ಬಗೆಗಿನ ಪೊಳ್ಳು ಭರವಸೆಗಳು ಜಗಜ್ಜಾಹೀರು ಆಗಿರುವುದರಿಂದಲೇ  ಇಂದು ಮೋದಿಯ ಬಣ್ಣದ ಮಾತುಗಳಿಗೆ ನೆಲೆಯಿಲ್ಲದಂತಾಗಿದೆ.

ಅಪರಾಧಿಗಳು ಮೇಲ್ವರ್ಗದವರೂ, ಸಂತ್ರಸ್ತರು ಕೆಳವರ್ಗದವರೂ ಆಗಿರುವ ಹಲವು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಾವಲು ನಿಲ್ಲುವ ನಿರ್ಲಜ್ಜ ಸರ್ಕಾರಗಳ, ರಾಜಕಾರಣಿಗಳ ನಡೆಯಿಂದಾಗಿ ಮಣಿಪುರದ ಈ ಭೀಭತ್ಸ ಘಟನೆಯೂ ಹತ್ತರ ಜೊತೆ ಹನ್ನೊಂದನೆಯದಾಗಿ ಮೂಲೆ ಸೇರಿದರೂ ಅತಿಶಯೋಕ್ತಿಯಲ್ಲ. ಮಹಿಳಾ ಸುರಕ್ಷತೆ, ಸ್ವಾತಂತ್ರ್ಯ ಕೇವಲ ಅಧಿಕಾರದ ಅಸ್ತ್ರವಾಗಿ ಭಾಷಣಗಳಿಗೆ ಸೀಮಿತವಾಗಿರುವ ಪ್ರಸಕ್ತ ಕಾಲಘಟ್ಟದಲ್ಲಿ  ಮಣಿಪುರ ಘಟನೆಯು ಹೆಣ್ಣು ಎಂದೆಂದಿಗೂ ಅತಂತ್ರಳು ಎಂಬುದು ಖಾತರಿಪಡಿಸುತ್ತಿದೆ.

 ಉತ್ತರ ಪ್ರದೇಶದ ಓರ್ವ ಕೇಸರಿಧಾರಿ ಮುಖ್ಯಮಂತ್ರಿಯು ಮುಸ್ಲಿಂ ಮಹಿಳೆಯರ ಮೃತದೇಹಗಳನ್ನು ಗೋರಿಯಿಂದ ಹೊರತೆಗೆದು ಅತ್ಯಾಚಾರಗೈಯ್ಯಿರಿ ಎಂದು ಬಹಿರಂಗವಾಗಿ ಹೇಳಿಕೆ ನೀಡಲು ಅವಕಾಶವಿರುವ ಭಾರತದಲ್ಲಿ,  ಗುಜರಾತ್ ಗಲಭೆಯ ಸಂದರ್ಭ   ಬಿಲ್ಕಿಸ್ ಬಾನು ಎಂಬ ಅಮಾಯಕ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಆಕೆಯ ಕುಟುಂಬವನ್ನು ಸರ್ವನಾಶ ಮಾಡಿದ ಆರೋಪಿಗಳನ್ನು ಬಿಡುಗಡೆಗೊಳಿಸಿ ಹೂಹಾರ ಹಾಕಿ ಸ್ವಾಗತಿಸಲು ಅವಕಾಶವಿರುವ ಭಾರತದಲ್ಲಿ,  ಲೈಂಗಿಕ ಕಿರುಕುಳಕ್ಕೆ ಒಳಗಾಗಿ ನ್ಯಾಯಕ್ಕಾಗಿ  ಬೀದಿಗಿಳಿದ  ದೇಶದ ಹೆಮ್ಮೆಯ ಮಹಿಳಾ ಕುಸ್ತಿಪಟುಗಳನ್ನು ನಡು ರಸ್ತೆಯಲ್ಲೇ ಹೀನಾಯವಾಗಿ ನಡೆಸಿಕೊಂಡ ಭಾರತದಲ್ಲಿ, ಹಾಥರಸ್ ನ ದಲಿತ ಬಾಲಕಿಯನ್ನು ಮೇಲ್ಜಾತಿ ಯುವಕರು ಅತ್ಯಾಚಾರಗೈದು ಕೊಂದಾಗ ಅವರ ರಕ್ಷಣೆಗೆ ಪೋಲೀಸರೇ ಕಾವಲು ನಿಲ್ಲಲು ಅವಕಾಶವಿರುವ   ಭಾರತದಲ್ಲಿ, , ನ್ಯಾಯದ ಪರ ಧ್ವನಿಯಾಗಿದ್ದಕ್ಕೆ  ತೀಸ್ತಾ  ಎಂಬ ದಿಟ್ಟ   ಪತ್ರಕರ್ತೆಯನ್ನು ಜೈಲಿಗಟ್ಟಲು ಅವಕಾಶವಿರುವ ಭಾರತದಲ್ಲಿ  ನಿರೀಕ್ಷೆಯನ್ನು ಕಳಕೊಂಡಿರುವ ಸಂತ್ರಸ್ತ ಹ್ರದಯಗಳಲ್ಲಿ  ಉಳಿದಿರುವುದು ಒಂದೇ ಪ್ರಶ್ನೆ… ಮಣಿಪುರದ ಆರೋಪಿಗಳ ಕೊರಳನ್ನು ಅಲಂಕರಿಸಲು ಹೂವಿನ ಹಾರ ಸಿದ್ಧವಿದೆಯೇ..,?

Join Whatsapp