ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆಯ ನಾಟಕವೇ?: ಡಿಕೆಶಿ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

Prasthutha|

ಬೆಂಗಳೂರು: ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ  ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕವೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

- Advertisement -

ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಬಹಿರಂಗ ಸಭೆಯಲ್ಲಿ ಡಿಕೆಶಿ ಹೇಳಿರುವ ಮಾತಿಗೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿಗಳು; ಕನಕಪುರ ತಾಲ್ಲೂಕು ರಾಮನಗರ ಕ್ಷೇತ್ರದಲ್ಲಿಯೇ ಉಳಿಯಬೇಕು ಎಂದು ಎಂದು ಹೇಳಿದ್ದಾರೆ.

ಖಜಾನೆ ತುಂಬಿಸಿಕೊಳ್ಳುವ ಹುನ್ನಾರ:

- Advertisement -

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ; ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಡಿಕಲ್ ಕಾಲೇಜ್ ಹೈಜಾಕ್ ಹಿಂದೆಯೂ ಹುನ್ನಾರ

ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ ಎನ್ನುವ ಇವರು; ಇಷ್ಟು ದಿನ ಶಾಸಕರಾಗಿ, ಸಚಿವರಾಗಿ ಉಪ ಮುಖ್ಯಮಂತ್ರಿ ಆಗಿ ಮಾಡಿದ್ದೇನು? ತಮ್ಮ ಜೇಬು ತುಂಬಿಸಿಕೊಂಡಿದ್ದು, ತಮ್ಮ ಮನೆಯನ್ನು ಉದ್ಧಾರ ಮಾಡಿಕೊಂಡಿದ್ದಷ್ಟೇ. ಇಷ್ಟಕ್ಕೂ ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ  ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ?  ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕ! ಈಗಾಗಲೇ ಕನಕಪುರಕ್ಕೆ ಒಂದು ಮೆಡಿಕಲ್ ಕೊಟ್ಟಿದ್ದರೂ ರಾಮನಗರ ಮೆಡಿಕಲ್ ಕಾಲೇಜನ್ನು ಕದ್ದು ಒಯ್ಯವುದರ ಹಿಂದೆಯೂ ಇದೇ ದುಷ್ಟ ತಂತ್ರ ಅಡಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನಿಸಿದ್ದಾರೆ.

ಕನಕಪುರಕ್ಕೆ 52 ಕೀ.ಮೀ. ದೂರದಲ್ಲಿದೆ ಬೆಂಗಳೂರು. 25 ಕೀ.ಮೀ. ದೂರದಲ್ಲಿದೆ ರಾಮನಗರ. ಜನರಿಗೆ ಯಾವುದು ಅನುಕೂಲ? ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ? ಉಪ ಮುಖ್ಯಮಂತ್ರಿಗಳ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರದ ಉದ್ದೇಶ

2006-2007ರಲ್ಲಿ ಕನಕಪುರ ಹೇಗಿತ್ತು? ಡಿಕೆಶಿ ಅವರು ನೆನಪು ಮಾಡಿಕೊಳ್ಳಬೇಕು. ಆಗಲೇ ಪಟ್ಟಣದ ಡಬಲ್ ರಸ್ತೆ ನಿರ್ಮಾಣ, ಕನಕಪುರ ಹೆಬ್ಬಾಗಿಲಿನಲ್ಲಿರುವ ಸೇತುವೆ ನಿರ್ಮಾಣಕ್ಕೆ ಯೋಜನೆ ಕೊಟ್ಟವನು ನಾನು. ಸಂಗಮದಲ್ಲಿ ಪ್ರವಾಹ ಬಂದಾಗಲೆಲ್ಲಾ ಅನೇಕರು ಹಗ್ಗ ಕಟ್ಟಿಕೊಂಡು ರಸ್ತೆ ದಾಟಲು ಹೋಗಿ ಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಅಲ್ಲಿ ಸೇತುವೆ ನಿರ್ಮಿಸಿ ಮಹದೇಶ್ವರ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗೆ ಇದೇ ಡಿ.ಕೆ.ಶಿವಕುಮಾರ್ ಅವರು 2006ರಲ್ಲಿಯೇ ವಿರೋಧ ಮಾಡಿದ್ದರು! ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಮಾತು!! ನದಿಯಲ್ಲಿ ಜನರು ಕೊಚ್ಚಿಕೊಂಡು ಹೋಗಿ ಸತ್ತರೂ ಪರವಾಗಿಲ್ಲ. ಆದರೆ, ಇವರ ರಿಯಲ್ ಎಸ್ಟೇಟ್ ವ್ಯವಹಾರ ಪೊಗದಸ್ತಾಗಿ ಸಾಗಬೇಕು. ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಲಿಲ್ಲ.. ಅದೇ ನಮ್ಮ ಪುಣ್ಯ ಎಂದು ಮಾಜಿ ಮುಖ್ಯಮಂತ್ರಿ ಅವರು ವ್ಯಂಗ್ಯವಾಡಿದ್ದಾರೆ.

ಮೈತ್ರಿ ಸರಕಾರ ತೆಗೆದಿದ್ದಕ್ಕೆ ಮೆಡಿಕಲ್ ಕಾಲೇಜ್ ಯೋಜನೆ ನೆನೆಗುದಿಗೆ

ಕನಕಪುರ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಪಾಲಾದ ಮೇಲೆ ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದೆ. ಆದರೆ, ಇದೇ ಮಹಾನುಭಾವರೇ ಮೈತ್ರಿ ಸರಕಾರವನ್ನು ತೆಗೆದ ಪರಿಣಾಮ ಆ ಯೋಜನೆ ನೆನೆಗುದಿಗೆ ಬಿತ್ತು. ಯೋಜನೆಯೂ, ಅದರ 350 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವೂ ಅಲ್ಲಿಯೇ ಉಳಿಯಿತು. ಉಪ ಮುಖ್ಯಮಂತ್ರಿ ಆದವರು ಆ ಯೋಜನೆಯನ್ನು ಪೂರ್ಣಗೊಳಿಸಬೇಕೆ? ಅಥವಾ ರಾಮನಗರ ಮೆಡಿಕಲ್ ಕಾಲೇಜ್ ಅನ್ನು ಹೈಜಾಕ್ ಮಾಡಲು ಹುನ್ನಾರ ನಡೆಸಬೇಕೇ? ಎಂದು ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಅವರ ಕಾಲೆಳೆದಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳ ಜನರ ಬಹುಕಾಲದ ಕನಸು. ಆ ಕನಸನ್ನು ನಾನು  ನನಸು ಮಾಡಿದ್ದೇನೆ. ಈಗ ತಮ್ಮ ಸ್ವಾರ್ಥಕ್ಕಾಗಿ ರಾಮನಗರ ಜಿಲ್ಲೆ ಜನರ ಬೆನ್ನಿಗೆ ಚೂರಿ ಹಾಕಿ ಕನಕಪುರದ ಜನರ ಹಿತಕ್ಕೆ ಕೊಡಲಿಪೆಟ್ಟು ಹಾಕುವ ಹುನ್ನಾರ ನಡೆದಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನಕಪುರ ಸೇರಿ 4 ವಿಧಾನಸಭೆ ಕ್ಷೇತ್ರಗಳ ಜನರೂ ಒಟ್ಟಾಗಿ ಒಂದೇ ಜಿಲ್ಲೆಯಲ್ಲಿ ಉಳಿಯಲಿದ್ದಾರೆ. ಡಿ.ಕೆ.ಶಿವಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Join Whatsapp