ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಲು ಭರತ್ ಶೆಟ್ಟಿ ಟೆರರಿಸ್ಟಾ?: ಮಂಜುನಾಥ್ ಭಂಡಾರಿ

Prasthutha|

ಮಂಗಳೂರು : ಭರತ್ ಶೆಟ್ಟಿ ಸಂಸತ್‌ಗೆ ಯಾವ ರೀತಿ ನುಗ್ಗುತ್ತಾರೆ, ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಲು ಭರತ್ ಶೆಟ್ಟಿ ಟೆರಿರಿಸ್ಟಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಪ್ರಶ್ನಿಸಿದ್ದಾರೆ.

- Advertisement -

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ರಾಹುಲ್ ಗಾಂಧಿ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದರು.

ಭರತ್ ಶೆಟ್ಟಿಗೆ ರಾಹುಲ್ ಗಾಂಧಿಯ ಬಳಿಗೆ ಹೋಗುವುದು ಬಿಡಿ, ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನ ಬಳಿಗೆ ಹೋಗಲು ಸಾಧ್ಯವಿಲ್ಲ, ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ, ಭರತ್ ಶೆಟ್ಟಿ ಇದೇ ರೀತಿ ಮಾತನಾಡುತ್ತಾ ಹೋದರೆ ಪೊಲೀಸರು ಭರತ್ ಶೆಟ್ಟಿ ಬಳಿಗೆ ಹೋಗಿ ಸರಿಯಾದ ಉಪಚಾರ ಮಾಡುತ್ತಾರೆ ಎಂದರು.

- Advertisement -

ಸಮಯ ಬಂದಾಗ ಶಸ್ತ್ರಾಸ್ತ್ರ ತೆಗೆಯುತ್ತೇವೆ ಎಂದು ಭರತ್ ಶೆಟ್ಟಿ ಹೇಳಿದ್ದಾರೆ, ಹಾಗಾದರೆ ಆ ಶಸ್ತ್ರಾಸ್ತ್ರಗಳನ್ನು ಎಲ್ಲಿಟ್ಟಿದ್ದಾರೆ ಎಂದು ಪೊಲೀಸರು ತಪಾಸಣೆ ಮಾಡಬೇಕು, ಅನುಮತಿ ಇಲ್ಲದೇ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವುದು ಅಪರಾಧ, ಹಾಗಾಗಿ ಪೊಲೀಸರು ಭರತ್ ಶೆಟ್ಟಿಯವರ ಹೇಳಿಕೆ ಬಗ್ಗೆ ಅವರನ್ನು ವಿಚಾರಣೆ ಮಾಡಬೇಕು ಎಂದು ಮಂಜುನಾಥ್ ಭಂಡಾರಿ ಆಗ್ರಹಿಸಿದರು.

ರಾಹುಲ್ ಗಾಂಧಿಗೆ ಮೋದಿಯವರು ಬಾಲಕ ಬುದ್ಧಿ ಎಂದು ಹೇಳಿದ ಬಳಿಕ ಬಿಜೆಪಿಯವರು ಬಾಲ ಬಿಚ್ಚುತ್ತಿದ್ದಾರೆ, ಬಿಜೆಪಿಯವರಿಗೆ ವಿರೋಧ ಪಕ್ಷ ಬೇಡ, ಸರ್ವಾಧಿಕಾರವೇ ಬೇಕಿತ್ತು, ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಿದ್ದನ್ನು ಅರಗಿಸಿಕೊಳ್ಳಲಾಗದೆ ಬಿಜೆಪಿಯವರು ಸ್ಥಿಮಿತಿ ಕಳೆದುಕೊಂಡಿದ್ದಾರೆ ಎಂದರು.

ಬಿಜೆಪಿಯವರು ಕೇವಲ ರಾಹುಲ್ ಗಾಂಧಿ ಬಗ್ಗೆಯೇ ಮಾತಾಡುತ್ತಾರೆ, ರಾಹುಲ್ ಗಾಂಧಿ ಬಗ್ಗೆ ಇವರಿಗೆ ಎಷ್ಟು ಭಯ ಇದೆ ಎಂದು ಅದರಲ್ಲೇ ಗೊತ್ತಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ‌ ಶಾಸಕರ ವರ್ತನೆಗಳಿಂದ ನಮಗೆ ಕರಾವಳಿಯ ಶಾಸಕರು ಎನಿಸಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ಹೇಳಿದ ಅವರು, ರಾಜ್ಯದಲ್ಲಿ‌ ಕಾಂಗ್ರೆಸ್ ಸರ್ಕಾರ ಇರುವುದನ್ನು ಅರಗಿಸಿಕೊಳ್ಳಲಾಗದೆ ಬಿಜೆಪಿಯವರು ಗಲಭೆ ಮಾಡುವ ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು‌.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆನ್ ಪಿಂಟೋ, NSUI ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಸೇರಿ ಇತರರು ಉಪಸ್ಥಿತರಿದ್ದರು.

Join Whatsapp