ಬಾಗ್ದಾದ್: ಇರಾಕ್ನ ಪ್ರಭಾವಿ ಸೇನಾ ನಾಯಕ ಹಾಗೂ ಜನರಲ್ ಒಬ್ಬರ ಹತ್ಯೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾಕ್ ನ ಸುಪ್ರೀಂ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ.
ಜನರಲ್ ಕಾಸಿಂ ಸುಲೈಮಾನಿ ಹಾಗೂ ಅಬು ಮಹ್ದಿ ಅಲ್–ಮುಹಂದೀಸ್ ಹತ್ಯೆಗೆ ಅಂದಿನ ಅಮೆರಿಕ ಸರ್ಕಾರ ಆದೇಶಿಸಿದ ಡ್ರೋನ್ ದಾಳಿಯು ಕಾರಣವಾಗಿತ್ತು. 2020ರ ಜನವರಿಯಲ್ಲಿ ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಈ ದಾಳಿ ನಡೆದಿತ್ತು.
ಅಬು ಮಹ್ದಿ, ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ವಿರುದ್ಧ ಹೋರಾಡಲು ರಚಿಸಿದ್ದ ಪಡೆಯ ಉಪನಾಯಕರಾಗಿದ್ದರು. ಸುಲೈಮಾನಿ, ಇರಾನ್ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಮುಖ್ಯಸ್ಥರಾಗಿದ್ದರು. ಪೂರ್ವಾಲೋಚಿತ ಕೊಲೆ ಆರೋಪದ ಮೇಲೆ ಬಂಧನ ವಾರಂಟ್ ಹೊರಡಿಸಲಾಗಿದ್ದು, ಅಪರಾಧ ಸಾಬೀತಾದರೆ ಮರಣದಂಡನೆ ಶಿಕ್ಷೆಯಾಗಲಿದೆ.