‘ನಾವೆಲ್ಲರೂ ಒಂದಾಗಿ ಇಸ್ರೇಲ್ ಅನ್ನು ಸೋಲಿಸೋಣ’: ಇರಾನ್ ಸರ್ವೋಚ್ಛ ನಾಯಕ ಖಮೇನಿ ಘೋಷಣೆ

Prasthutha|

‘ಫೆಲೆಸ್ತೀನ್ ದೇಶದ ರಕ್ಷಣೆಗಾಗಿ ಇರಾನ್ ದಾಳಿ’

- Advertisement -

ತೆಹರಾನ್: ಇಸ್ರೇಲ್ ಮೇಲೆ ಇರಾನ್ ನೂರಾರು ಕ್ಷಿಪಣಿಗಳನ್ನು ಏಕಕಾಲಕ್ಕೆ ಉಡಾಯಿಸಿ ತನ್ನ ಶಕ್ತಿ ಪ್ರದರ್ಶನ ತೋರಿಸಿದೆ.


ಇರಾನ್ ಮೇಲೆ ಸದ್ಯದಲ್ಲೇ ತಕ್ಕ ರೀತಿಯಲ್ಲಿ ದಾಳಿ ಮಾಡುವುದಾಗಿ ಇಸ್ರೆಲ್ ಎಚ್ಚರಿಕೆ ನೀಡಿದೆ. ಇಸ್ರೇಲ್ ದಾಳಿ ಮಾಡಿದಲ್ಲಿ ಹಿಂದಿಗಿಂತಲೂ ಹೆಚ್ಚು ತೀವ್ರವಾಗಿ ದಾಳಿ ಮಾಡುವುದಾಗಿ ಇರಾನ್ ಕೂಡ ಎಚ್ಚರಿಕೆ ನೀಡಿದೆ.

- Advertisement -

ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಇರಾನ್ ರಾಜಧಾನಿ ತೆಹರಾನ್ ನಲ್ಲಿ ಲಕ್ಷ ಲಕ್ಷ ಜನರನ್ನು ಉದ್ದೇಶಿಸಿ ಇಂದು ಭಾಷಣ ಮಾಡಿದರು.

ಖಮೇನಿ ಅವರು ತಮ್ಮ ಅಪರೂಪದ ಶುಕ್ರವಾರದ ಪ್ರಾರ್ಥನಾ ಸಂದೇಶದಲ್ಲಿ, ಮುಸ್ಲಿಂ ರಾಷ್ಟ್ರಗಳು ಅಫ್ಘಾನಿಸ್ತಾನದಿಂದ ಯೆಮನ್ ವರೆಗೆ, ಇರಾನ್ ನಿಂದ ಗಾಝಾ ಮತ್ತು ಲೆಬನಾನ್ ವರೆಗೆ ರಕ್ಷಣಾ ಪಟ್ಟಿಯನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದ್ದಾರೆ.

ಬರೋಬ್ಬರಿ 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರದ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖಮೇನಿ, ‘ಎಲ್ಲರೂ ಒಂದಾಗಿ ನಮ್ಮ ಶತ್ರುವನ್ನು ಮಣಿಸೋಣ’ ಎಂದು ಘೋಷಿಸಿದರು.

ಈ ವೇಳೆ ಮಾತನಾಡಿದ ಇರಾನ್ ಸರ್ವೋಚ್ಛ ನಾಯಕ ಹಾಗೂ ಧರ್ಮ ಗುರು ಅಯತೊಲ್ಲಾ ಅಲಿ ಖಮೇನಿ, ‘ವಿಶ್ವಾದ್ಯಂತ ಇರುವ ಮುಸ್ಲಿಮರಿಗೆ ಶತ್ರುಗಳು ಇದ್ದಾರೆ. ನಾವೆಲ್ಲರೂ ಒಂದಾಗಿ ಸೇರಿ ಆ ಶತ್ರುವನ್ನು ಮಣಿಸಬೇಕು’ ಎಂದು ಇಸ್ರೇಲ್ ನ ಹೆಸರು ಹೇಳದೆ ಸಮರದ ಕರೆ ನೀಡಿದರು.


ಅತಿಕ್ರಮಣದ ವಿರುದ್ಧ ಹೋರಾಟ ಮಾಡುತ್ತಿರುವ ಫೆಲೆಸ್ತೀನ್ ಹಾಗೂ ಲೆಬನಾನ್ ಜನತೆಯ ಕುರಿತು ಈ ವಿಶ್ವದ ಯಾವುದೇ ಅಂತಾರಾಷ್ಟ್ರೀಯ ಕಾನೂನಿಗೂ ಕೂಡಾ ವಿರೋಧ ಮಾಡಲು ಹಕ್ಕು ಇಲ್ಲ ಎಂದು ಹೇಳಿದರು.

ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿ ಮತ್ತು ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯು ನ್ಯಾಯಸಮ್ಮತವಾದ ಕ್ರಮವಾಗಿದೆ. ನಾವು ಇಸ್ರೇಲ್ ಗೆ ಪ್ರತಿಕ್ರಿಯಿಸಲು ವಿಳಂಬ ಅಥವಾ ಆತುರ ಮಾಡುವುದಿಲ್ಲ. ಕ್ಷಿಪಣಿ ದಾಳಿಯನ್ನುದ್ದೇಶಿಸಿ ನಮ್ಮ ಸಶಸ್ತ್ರ ಪಡೆಗಳ ಅದ್ಭುತ ಕ್ರಮವು ಸಂಪೂರ್ಣವಾಗಿ ಕಾನೂನು ಮತ್ತು ನ್ಯಾಯಸಮ್ಮತವಾಗಿತ್ತು ಎಂದು ಖಮೇನಿ ಹೇಳಿದ್ದಾರೆ.


ಫೆಲೆಸ್ತೀನ್ ಗಾಗಿ ಇರಾನ್ ದಾಳಿ ಎಚ್ಚರಿಕೆ!
ಇರಾನ್ ದೇಶವು ಇಸ್ರೇಲ್ ನಿಂದ ಆಕ್ರಮಣ ಆಗಿರುವ ಫೆಲೆಸ್ತೀನ್ ದೇಶದ ರಕ್ಷಣೆಗಾಗಿ ದಾಳಿ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ ಅಯತೊಲ್ಲಾ ಅಲಿ ಖಮೇನಿ, ನೀವು ನಮ್ಮನ್ನು ಪ್ರಚೋದನೆ ಮಾಡಿದಷ್ಟೂ ನಾವು ದಾಳಿ ನಡೆಸುತ್ತೇವೆ ಎಂದು ಹೇಳಿದರು.


ಇರಾನ್ ದೇಶವು ಇಸ್ರೇಲ್ ನಿಂದ ಎದುರಾಗುವ ಯಾವುದೇ ದಾಳಿಯನ್ನು ತಡೆಯಲಿದೆ, ಅಷ್ಟೇ ಅಲ್ಲ, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಹಕ್ಕು ಹೊಂದಿದ್ದೇವೆ ಎಂದು ಖಮೇನಿ ಹೇಳಿದರು.



Join Whatsapp