ತಮಿಳುನಾಡಿನಲ್ಲಿ ಐಪಿಎಸ್ ಅಧಿಕಾರಿಯಿಂದ ವ್ಯಕ್ತಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ; ಹೇಳಿಕೆ ಹಿಂಪಡೆಯಲು ಒತ್ತಡ

Prasthutha|

ಚೆನ್ನೈ: ಕಸ್ಟಡಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಅಮಾನವೀಯ ಚಿತ್ರಹಿಂಸೆ ನೀಡಿದ ಐಪಿಎಸ್ ಅಧಿಕಾರಿ ಬಲ್ವೀರ್ ಸಿಂಗ್ ಅಮಾನತು ಆದೇಶವನ್ನು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಬುಧವಾರವೇ ಹೊರಡಿಸಿದ್ದಾರೆ. ಆದರೆ ತನಿಖೆ ತಡೆಯಲು ಇದರ ನಡುವೆ ಚಿತ್ರಹಿಂಸೆ ಪಡೆದ ವ್ಯಕ್ತಿ ಹಾಗೂ 13 ಮಂದಿ ಹಿಂಸಿತರ ಹೇಳಿಕೆ ಹಿಂದಕ್ಕೆ ಪಡೆಯಲು ಒತ್ತಡ ಹೇರಲಾಗುತ್ತಿದೆ ಎಂದವರು ಅಲವತ್ತುಕೊಂಡಿದ್ದಾರೆ.

- Advertisement -


ಅಂಬಾಸಮುದ್ರಂನಲ್ಲಿ ಎಎಸ್ ಪಿ ಆಗಿ ಬಂದ ಸಿಂಗ್ ಕಸ್ಟಡಿಯಲ್ಲಿ ಹಲವರನ್ನು ಹೀನಾಯವಾಗಿ ಹಿಂಸಿಸಿದ್ದು ವರದಿಯಾಗಿದೆ. ಹೆಚ್ಚಿನವರ ಮುಂಭಾಗದ ಹಲ್ಲನ್ನು ಜಲ್ಲಿ ಕಲ್ಲು ಬಳಸಿ ಕೀಳಲಾಗಿದೆ. ಎರಡು ಪ್ರಕರಣಗಳಲ್ಲಿ ವೃಷಣಗಳನ್ನು ಹಾನಿಗೊಳಿಸಲಾಗಿದೆ. ಮಾತುಕತೆ ಮೂಲಕ ಇಲ್ಲವೇ ವಕೀಲರ ಮೂಲಕ ನಾವು ಪ್ರಕರಣವನ್ನು ಇಲ್ಲಿಗೇ ಮುಗಿಸಿಕೊಳ್ಳೋಣ ಎಂದು ಒತ್ತಡ ಹಾಕುಲಾಗುತ್ತಿದೆ ಎಂಬ ಸಂತ್ರಸ್ತರ ಹೇಳಿಕೆ ನೀಡಿದ್ದಾರೆ. ಆದರೆ ಇದನ್ನು ಎಸ್ ಪಿ ನಿರಾಕರಿಸಿದ್ದಾರೆ.


ರಾಜಸ್ತಾನದ ಟೋಂಕ್ ನ ಬಲ್ವೀರ್ ಸಿಂಗ್ 2020ರ ಬ್ಯಾಚಿನ ಐಪಿಎಸ್ ಅಧಿಕಾರಿ. ಹಲ್ಲು ಇಲ್ಲದ, ಚಿತ್ರಹಿಂಸೆಯ ಗುರುತುಗಳ ಫೋಟೋಗಳೆಲ್ಲ ಜಾಲ ತಾಣಗಳಲ್ಲಿ ವೈರಲ್ ಆದ ಮೇಲೆ ಈ ಅಧಿಕಾರಿಯ ಹಿಂಸಾಕೃತ್ಯ ಬಹಿರಂಗವಾಗುತ್ತಿದೆ. ಡಿಜಿಪಿ ಸಿಂಗ್ ಅವರು ಎಸ್.ಪಿಯನ್ನು ಹುದ್ದೆಯಿಂದ ಹೊರಗಿಟ್ಟಿದ್ದಾರೆ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಕೆಲಸದಿಂದ ಅಮಾನತು ಮಾಡಿದ್ದಾರೆ.
ಮಾಧ್ಯಮಗಳ (ಇಂಎ) ಪ್ರಶ್ನೆಗಳಿಗೆ ಉತ್ತರಿಸದೆ ಸಿಂಗ್ ನಿರಾಕರಿಸಿದ್ದಾರೆ.
ಆರೋಪ ಮಾಡಿರುವವರಲ್ಲಿ ಆರು ಜನರ ಪ್ರಕಾರ ಸಿಂಗ್ ರಿಂದ ಚಿತ್ರಹಿಂಸೆಗೊಳಗಾದವರ ಸಂಖ್ಯೆಯು 40 ಇದೆ. ಅದರಲ್ಲಿ 13 ಜನರು ಸಿಂಗ್ ಇದ್ದ ವ್ಯಾಪ್ತಿಯ ಕಲ್ಲಿಡೈಕುರುಚ್ಚಿ, ಅಂಬಾಸಮುದ್ರಂ ಮತ್ತು ವಿಕ್ರಮಸಿಂಗಪುರಂಗೆ ಸೇರಿದವರು. ಇನ್ನೂ ಮೂವರು ಈ ಸಿಂಗ್ ವಿರುದ್ಧ ಹೇಳಿಕೆ ನೀಡಲು ಮುಂದೆ ಬಂದಿದ್ದಾರೆ.

- Advertisement -


“ಚಿತ್ರಹಿಂಸೆಯಲ್ಲಿ ಸಿಂಗ್ ಬೆನ್ನಿಗೆ ನಿಂತ ಇನ್ನೂ ಕೆಲವರು ಅಮಾನತು ಆಗಲಿದ್ದಾರೆ. ಕ್ರಿಮಿನಲ್ ಪ್ರಕರಣ ಹೂಡಿದರೆ ಅಧಿಕಾರಿಗಳು ಕೆಲಸದಿಂದ ವಜಾ ಆಗುತ್ತಾರಾದ್ದರಿಂದ ಈ ಬಗ್ಗೆ ಜಿಜ್ಞಾಸೆ ನಡೆದಿದೆ. ಮಾತುಕತೆ ಮೂಲಕ ಮೂವರು ಈಗಾಗಲೇ ದೂರನ್ನು ಹಿಂಪಡೆದುಕೊಂಡಿದ್ದು, ಇನ್ನೂ ಮೂವರು ದೂರು ಹಿಂಪಡೆಯಲು ಒಪ್ಪಿದ್ದಾರೆ” ಎಂದು ತಿರುನೆಲ್ವೇಲಿ ಕಂದಾಯ ಅಧಿಕಾರಿ ಹೇಳಿದರು.
ಆದರೆ ಮಾರ್ಚ್ 10ರಂದು ತನ್ನ ಮೂರು ಹಲ್ಲುಗಳನ್ನು ಚಿತ್ರಹಿಂಸೆಯಿಂದ ಕಳೆದುಕೊಂಡಿರುವ 31 ವರ್ಷದ ಎಂ. ಚೆಲ್ಲಪ್ಪ ತನಗೆ ನ್ಯಾಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
“ಅವರು ಒಬ್ಬರು ವಕೀಲ ಮತ್ತು ಸಂಬಂಧಿಕರೊಬ್ಬರನ್ನು ಕರೆದುಕೊಂಡು ಬಂದು ಸಂಧಾನಕ್ಕೆ ಪ್ರಯತ್ನಿಸಿದರು. ಆದರೆ ನಾನು ಹೇಳಿಕೆ ಬದಲಾಯಿಸುವುದಿಲ್ಲ” ಎನ್ನುತ್ತಾರೆ ಕೃಷಿ ಕೆಲಸದ ಚೆಲ್ಲಪ್ಪ.
ಕುಟುಂಬ ವಿವಾದದ ಸಂಬಂಧವಾಗಿ ಅಂಬಾಸಮುದ್ರದ ಆಟೋ ಚಾಲಕ 49ರ ಹರೆಯದ ವೇದನಾರಾಯಣರನ್ನು ಮಾರ್ಚ್ 23ರಂದು ಪೊಲೀಸರು ಕಸ್ಟಡಿಗೆ ಪಡೆದಿದ್ದರು. “ನಾನು ರೌಡಿಯಾಗಲಿ, ಅಪರಾಧಿಯಾಗಲಿ ಅಲ್ಲ. ಸಾಮಾನ್ಯ ಆಟೋ ಚಾಲಕ, ನನಗೆ ಮೊಮ್ಮಕ್ಕಳಿದ್ದಾರೆ” ಎನ್ನುವ ವೇದನಾರಾಯಣರನ್ನು ವಿಕ್ರಮಸಿಂಗಪುರಂ ಪೊಲೀಸ್ ಠಾಣೆಗೆ ಒಯ್ದರು; ಅಲ್ಲಿ ಬಲ್ವೀರ್ ಸಿಂಗ್ ಚಿತ್ರಹಿಂಸೆ ನೀಡಿದ್ದಾರೆ.


“ಅವರು ನನ್ನ ಹಲ್ಲು ಕೀಳುವಾಗ ನಾನು ದೀನನಾಗಿ ಬೇಡಿಕೊಂಡೆ. ನಮ್ಮದು ಮನೆಯ ಸಣ್ಣ ಜಗಳ ಎಂದು ಹಿಂದಿಯಲ್ಲೋ ಇಂಗ್ಲಿಷ್ ನಲ್ಲೋ ಅವರಿಗೆ ಹೇಳುವಂತೆ ನಾನು ಇತರ ಪೊಲೀಸರಲ್ಲೂ ಬೇಡಿಕೊಂಡೆ. ಆದರೆ ಯಾರೂ ಸಹಾಯ ಮಾಡುವ ಬದಲು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡರು. ಮಧ್ಯ ರಾತ್ರಿ 11.30 ಗಂಟೆಯವರೆಗೆ ಚಿತ್ರಹಿಂಸೆ ನೀಡಿ ಬಿಟ್ಟರು” ಎಂದು ಅವರು ಆರೋಪಿಸಿದರು.
ಬುಧವಾರ ಮತ್ತೆ ನನ್ನನ್ನು ಸ್ಪೆಷಲ್ ಬ್ರಾಂಚಿನ ಅಧಿಕಾರಿಯೊಬ್ಬರು ಬಂದು ಠಾಣೆಗೆ ಕರೆದುಕೊಂಡು ಹೋಗಿ ದೂರನ್ನು ನಿರಾಕರಿಸುವ ಕಾಗದಕ್ಕೆ ಸಹಿ ಮಾಡಲು ಹೇಳಿದರು. ಆದರೆ ಅವರು ಮಾಡಲು ಒಪ್ಪಲಿಲ್ಲ. ಈ ಅನಾಗರಿಕ ಪ್ರಕರಣದ ಬಗ್ಗೆ ಒಂದು ತನಿಖೆ ಆರಂಭವಾಗಿದೆ ಎಂದು ವಿಕ್ರಮಸಿಂಗಪುರಂನ ಇನ್ಸ್ ಪೆಕ್ಟರ್ ಸಿ. ಪೆರುಮಾಳ್ ಹೇಳಿದರು.


ಕೇಸು ಹಿಂಪಡೆಯಲು ಪ್ರಯತ್ನ ನಡೆಯುತ್ತಿದೆ ಎನ್ನುವುದು ಸಂಪೂರ್ಣ ಸುಳ್ಳು. ನಾವು ಹಾಗೆ ಮಾಡುವುದಿಲ್ಲ ಎಂದು ಜಿಲ್ಲಾ ಎಸ್ ಪಿ ಪಿ. ಶರವಣನ್ ಹೇಳಿದರು.
ಚೇರನ್ ಮಹದೇವಿ ಸಹ ಕಲೆಕ್ಟರ್ ರಲ್ಲಿ ಏಪ್ರಿಲ್ 10ರವರೆಗೆ ಎಲ್ಲ ಸಂತ್ರಸ್ತರನ್ನು ಕರೆದೊಯ್ದು ಹೇಳಿಕೆ ದಾಖಲಿಸಲಾಗುವುದು ಎಂದು ಶರವಣನ್ ತಿಳಿಸಿದರು.
ಮದರಾಸು ಹೈಕೋರ್ಟಿನ ಮಧುರೈ ಪೀಠದಲ್ಲಿ ವಕೀಲರಾಗಿರುವ ಹಾಗೂ ಹಿಂದುಳಿದ ಜನವರ್ಗದ ಪರ ಸಾಮಾಜಿಕ ಕಾರ್ಯಕರ್ತರೂ ಆದ ಮಹಾರಾಜನ್ ಅವರನ್ನು ದೇವಾಲಯದ ಉತ್ಸವಕ್ಕೆ ಆಹ್ವಾನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿನ 22ರ ಹರೆಯದ ತರುಣ ಸೂರ್ಯ ಮತ್ತು ಇತರ ಸಂತ್ರಸ್ತರ ಗುಂಪು ಅಲ್ಲಿ ಮಹಾರಾಜನ್ ರಿಗೆ ಚಿತ್ರಹಿಂಸೆಯ ಸಂಪೂರ್ಣ ಮಾಹಿತಿ ನೀಡಿದೆ.
ಕುಡಿತದ ಅಮಲಿನಲ್ಲಿ ಸಿಸಿಟೀವಿಗೆ ಹಾನಿ ಮಾಡಿದ್ದಾನೆ ಎಂದು ಆರೋಪಿಸಿ ಆ ಯುವಕನನ್ನು ಚಿತ್ರಹಿಂಸೆಗೀಡು ಮಾಡಿದ ಎಸ್.ಪಿ. ಸಿಂಗ್ ಅವರು ಆ ವ್ಯಕ್ತಿಯ ಹಲ್ಲು ಕಿತ್ತಿದ್ದ.
ಸಿಸಿಟೀವಿಗೆ ಹಾನಿಯಾದ ಒಂದು ಗಂಟೆಯೊಳಗೆ ಸೂರ್ಯನಿಗೆ ಚಿತ್ರಹಿಂಸೆ ನೀಡಿ, ಹಲ್ಲು ಕಿತ್ತು, ಸಿಸಿಟೀವಿಗೆ ರೂ. 45,000 ನೀಡಲು ಒತ್ತಾಯಿಸಿ, ಆಮೇಲೆ ಕೇಸು ದಾಖಲಿಸಿದ್ದಾರೆ ಎಂದು ಮಹಾರಾಜನ್ ಹೇಳಿದ್ದಾರೆ. ರಾಜನ್ ಇದನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಲ್ಲದೆ, ಕಲೆಕ್ಟರ್ ರಿಗೂ ಪತ್ರ ಬರೆದು ದೂರಿದ್ದರು.
ಆದರೆ ಬುಧವಾರ ನಾನು ಬಿದ್ದು ಹಲ್ಲು ಹೋಗಿದೆ ಎಂದು ಸೂರ್ಯ ಹೇಳಿಕೆ ಬದಲಿಸಿದ್ದಾನೆ.


ಮಹಾರಾಜನ್ ಫೋಟೋ ಮತ್ತು ವೀಡಿಯೋಗಳನ್ನು ಯೂಟ್ಯೂಬಿಗೆ ಹಾಕಿದ್ದು ಅದನ್ನು ಸಾಕಷ್ಟು ಜನ ಶೇರ್ ಮಾಡಿದ್ದಾರೆ. ಮಹಾರಾಜನ್ ತನಿಖೆಯಂತೆ ಸುಭಾಷ್, ಲಕ್ಷ್ಮಿಶಂಕರ್, ವೆಂಕಿಟೇಶ್ ಎನ್ನುವವರೂ ಸಿಂಗ್ ರಿಂದ ಚಿತ್ರಹಿಂಸೆ ಅನುಭವಿಸಿದ್ದಾರೆ. ಸುಭಾಷ್ ಹಲವಾರು ದಂತ ಗಾಯಗಳಿಗೆ ಒಳಗಾಗಿದ್ದಾರೆ, ಶಂಕರ್ ಮೂರು ಮತ್ತು ವೆಂಕಿಟೇಶ್ ಒಂದು ಹಲ್ಲು ಕಳೆದುಕೊಂಡಿದ್ದಾರೆ.



Join Whatsapp