IPL-2022: ಮಾರ್ಚ್‌ 26ಕ್ಕೆ ಆರಂಭ, ಎರಡು ಗುಂಪು, 4 ಮೈದಾನಗಳಲ್ಲಿ ಆಯೋಜನೆ

Prasthutha|

ನವದೆಹಲಿ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್-IPLನ 15ನೇ ಆವೃತ್ತಿ ಮಾರ್ಚ್‌ 26ರಿಂದ ಆರಂಭವಾಗಲಿದ್ದು, ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಾರಿ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ತಲಾ 5 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಮುಂಬೈನ ಮೂರು ಹಾಗೂ ಪುಣೆಯ ಒಂದು ಮೈದಾನಗಳಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ.

- Advertisement -


ಲೀಗ್ ಹಂತದಲ್ಲಿ ಎಲ್ಲಾ ತಂಡಗಳು 14 ಪಂದ್ಯಗಳನ್ನಾಡಲಿವೆ. ಎರಡು ಗುಂಪುಗಳಾಗಿ ವಿಂಗಡಿಸಲಾದ ಕಾರಣ A ಗುಂಪಿನ ತಂಡಗಳು ತಮ್ಮ ಗುಂಪಿನಲ್ಲಿರುವ 4 ಹಾಗೂ B ಗುಂಪಿನಲ್ಲಿರುವ ಒಂದು ತಂಡದ ವಿರುದ್ಧ ತಲಾ ಎರಡು ಪಂದ್ಯ ಹಾಗೂ ಉಳಿದ ನಾಲ್ಕು ತಂಡಗಳ ವಿರುದ್ಧ ತಲಾ ಒಂದು ಪಂದ್ಯಗಳನ್ನಾಡಲಿದೆ. 2011ನೇ IPL ಆವೃತ್ತಿಯಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.
ಮುಂಬೈನ ವಾಂಖೆಡೆ ಹಾಗೂ ಡಿವೈ ಪಾಟೀಲ್ ಸ್ಟೇಡಿಯಂಗಳಲ್ಲಿ ಎಲ್ಲಾ ತಂಡಗಳು ತಲಾ 4 ಪಂದ್ಯಗಳನ್ನು ಆಡಲಿದೆ. ಬ್ರಬೋರ್ನ್ ಮತ್ತು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ತಲಾ 3 ಪಂದ್ಯಗಳನ್ನಾಡಲಿವೆ. ಹೀಗೆ ಒಟ್ಟು 55 ಪಂದ್ಯಗಳು ಮುಂಬೈನಲ್ಲಿ ಹಾಗೂ 15 ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವುದರಿಂದ ಹಾಗೂ ಟೂರ್ನಿಯ ನಡುವೆ ವಿಮಾನಯಾನ ಪ್ರಯಾಣವನ್ನು ತಪ್ಪಿಸುವ ಉದ್ದೇಶದಿಂದ ಟೂರ್ನಿಯ ಆಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.



Join Whatsapp