ಐಪಿಎಲ್ 2022 | ರಾಹುಲ್ ಶತಕದ ಅಬ್ಬರಕ್ಕೆ ಮುಂಬೈ ಕಂಗಾಲು, 6ನೇ ಸೋಲು ಕಂಡ ರೋಹಿತ್ ಪಡೆ

Prasthutha|

ಐಪಿಎಲ್‌ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ (5) ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್‌ ತಂಡ, ಈ ಬಾರಿ ಸತತವಾಗಿ ಆರನೇ ಸೋಲು ಕಾಣುವ ಮೂಲಕ ಭಾರಿ ಮುಖಭಂಗ ಅನುಭವಿಸಿದ್ದು, ಪ್ಲೇ ಆಫ್‌ ಹಾದಿ ಬಹುತೇಕ ಕಠಿಣವಾಗಿದೆ. ಇದಕ್ಕೂ ಮೊದಲು 2013ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು 2019ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಟೂರ್ನಿಯ ಆರಂಭದಲ್ಲೇ ಸತತ 6 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು.

- Advertisement -

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌, ನಾಯಕ ಕೆ.ಎಲ್‌ ರಾಹುಲ್‌ ಅಬ್ಬರದ ಶತಕದ ನೆರವಿನಿಂದ 4 ವಿಕೆಟ್‌ ನಷ್ಟದಲ್ಲಿ 199 ರನ್ ಕಲೆಹಾಕಿತ್ತು. ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ ನಷ್ಟದಲ್ಲಿ 181 ರನ್‌ಗಳಿಸಲಷ್ಟೇ ಶಕ್ತವಾಯಿತು. ಆಮೂಲಕ 18 ರನ್‌ಗಳ ಅಂತರದಲ್ಲಿ ಲಕ್ನೋಗೆ ಶರಣಾಯಿತು.

ಮುಂಬೈ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಈ ಪಂದ್ಯದಲ್ಲೂ ಮುಂದುವರೆಯಿತು. ಜವಾಬ್ದಾರಿಯುತ ಇನ್ನಿಂಗ್ಸ್‌ ಆಡಬೇಕಿದ್ದ ರೋಹಿತ್‌ ಶರ್ಮಾ ಕೇವಲ 6 ರನ್‌ಗಳಿಸಿ ಆವೇಶ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಇಶಾನ್ ಕಿಶನ್ ಕೊಡುಗೆ 13ರನ್‌. ಮೂರನೇ ಕ್ರಮಾಂಕದಲ್ಲಿ ಬಂದ ʻಮಿನಿ ಎಬಿಡಿʼ ಖ್ಯಾತಿಯ ಡೆವಾಲ್ಡ್ ಬ್ರೆವಿಸ್, 1 ಸಿಕ್ಸರ್‌ ಮತ್ತು 6 ಬೌಂಡರಿಗಳ ನೆರವಿನಿಂದ 31 ರನ್‌ಗಳಿಸಿ ಆವೇಶ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ತಿಲಕ್ ವರ್ಮ 26, ಸೂರ್ಯಕುಮಾರ್ ಯಾದವ್ 37 ರನ್‌ ಮತ್ತು  ಪೊಲಾರ್ಡ್‌ 25 ರನ್‌ ಗಳಿಸಿದರು.

- Advertisement -

ಅಂತಿಮ ಓವರ್‌ನಲ್ಲಿ ಮುಂಬೈ ಗೆಲ್ಲಲು 19 ರನ್‌ಗಳಿಸಬೇಕಾಗಿತ್ತು. ದುಶ್ಮಂತ ಚಮೀರ ಎಸೆದ ಓವರ್‌ನಲ್ಲಿ ಜಯದೇವ್‌ ಉನಾದ್ಕತ್‌ ಮತ್ತು ಮುರುಗನ್‌ ಅಶ್ವಿನ್‌ ರನೌಟ್‌ ಆದರೆ, ಕಿರಾನ್‌ ಪೊಲಾರ್ಡ್‌ ಸ್ಟೋಯ್ನಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. 4 ಓವರ್‌ ಎಸೆದು 30 ರನ್‌ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್‌ ಕಬಳಿಸಿದ ಆವೇಶ್‌ ಖಾನ್‌ ಲಕ್ನೋ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸತತ 6ನೇ ಸೋಲಿನ ಮೂಲಕ ಮುಂಬೈ ಪ್ಲೇ ಆಫ್‌ ಕನಸು ಬಹುತೇಕ ಕಮರಿ ಹೋಗಿದೆ. ಕಳೆದ ಸೀಸನ್‌ನಲ್ಲೂ ಮುಂಬೈ ಇಂಡಿಯನ್ಸ್‌ ಹೀನಾಯ ಪ್ರದರ್ಶನ ತೋರಿ ನಿರ್ಗಮಿಸಿತ್ತು. ಮತ್ತೊಂದೆಡೆ ಆಡಿರುವ 6 ಪಂದ್ಯಗಳಲ್ಲಿ 4 ಪಂದ್ಯ ಜಯಿಸಿರುವ ಲಕ್ನೋ ಸೂಪರ್‌ ಜೈಂಟ್ಸ್‌, 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಗುಜರಾತ್‌ ಟೈಟನ್ಸ್‌ ಮೊದಲ ಸ್ಥಾನದಲ್ಲಿದೆ.

ಲಕ್ನೋ ಸೂಪರ್‌ ಜೈಂಟ್ಸ್‌ 199/4

ಇದಕ್ಕೂ ಮೊದಲು ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಲಕ್ನೋ ಸೂಪರ್‌ ಜೈಂಟ್ಸ್‌, ನಾಯಕ ಕೆಎಲ್ ರಾಹುಲ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಉತ್ತಮ ಆರಂಭ ಒದಗಿಸಿದ್ದರು. ಡಿ ಕಾಕ್‌ 24 ರನ್‌ಗಳಿಸಿದ್ದ ವೇಳೆ ಚೊಚ್ಚಲ ಪಂದ್ಯವನ್ನಾಡಿದ ಫ್ಯಾಬಿಯನ್‌ ಅಲೆನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆದರು. ಮತ್ತೊಂದೆಡೆ 60 ಎಸೆತಗಳನ್ನು ಎದುರಿಸಿ ಭರ್ಜರಿ 5 ಸಿಕ್ಸರ್‌ ಮತ್ತು 9 ಬೌಂಡರಿಗಳ ನೆರವಿನಿಂದ 103 ರನ್‌ ಗಳಿಸಿದ ರಾಹುಲ್‌ ಅಜೇಯರಾಗುಳಿದರು. ಮನೀಷ್‌ ಪಾಂಡೆ 38 ರನ್‌ ಗಳಿಸಿ ನಿರ್ಗಮಿಸಿದರು.



Join Whatsapp