ಐಪಿಎಲ್ 2022 ಪ್ಲೇ ಆಫ್: 3 ಸ್ಥಾನಕ್ಕೆ 7 ತಂಡಗಳ ಪೈಪೋಟಿ

Prasthutha|

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಬಹುತೇಕ ʻಕ್ಲೈಮ್ಯಾಕ್ಸ್ʼ ಹಂತವನ್ನು ತಲುಪಿದೆ. ಲೀಗ್ ಹಂತದ 74 ಪಂದ್ಯಗಳಲ್ಲಿ 63 ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದ್ದು, ಕೇವಲ 11 ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಅದಾಗಿಯೂ ಪ್ಲೇ ಆಫ್ ಹಂತಕ್ಕೇರುವ ಅಂತಿಮ 4 ನಾಲ್ಕು ತಂಡಗಳಲ್ಲಿ ಮೂರು ಸ್ಥಾನಗಳಿಗೆ ತೀವ್ರ ಪೈಪೋಟಿ ಮುಂದುವರಿದಿದೆ. ಮೇ 24ರಿಂದ ಐಪಿಎಲ್ನ ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗಲಿದೆ. ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟನ್ಸ್, ಅಧಿಕೃತವಾಗಿ ಪ್ಲೇ ಹಂತಕ್ಕೆ ಪ್ರವೇಶಿಸಿದ ಏಕೈಕ ತಂಡವಾಗಿದೆ. 11 ಪಂದ್ಯಗಳು ಬಾಕಿ ಉಳಿದಿರುವಂತೆಯೇ ಉಳಿದ ಮೂರು ಸ್ಥಾನಗಳಿಗೆ 7 ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಚಾಲ್ತಿಯಲ್ಲಿದೆ.

- Advertisement -


ಐಪಿಎಲ್ನ ಬಲಿಷ್ಠ ತಂಡಗಳಾದ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, 4 ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇ ಆಫ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಆರಂಭದಲ್ಲಿ ಅಬ್ಬರಿಸಿದರೂ, ಕಳೆದ 5 ಪಂದ್ಯಗಳಲ್ಲಿ ಸತತ ಸೋಲುಂಡ ಸನ್ರೈಸರ್ಸ್ ಹೈದರಾಬಾದ್ ತಂಡ ಕೂಡ ಪ್ಲೇ ಆಫ್ ಆಸೆಯನ್ನು ಕೈಬಿಟ್ಟಿಲ್ಲ.


ಉಳಿದಂತೆ ರಾಜಸ್ಥಾನ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇ ಆಫ್ ಹಂತವನ್ನು ಪ್ರವೇಶಿಸಲು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದೆ. ಆರ್ಸಿಬಿ, ಪಂಜಾಬ್ ಹಾಗೂ ಹೈದರಾಬಾದ್ ತಂಡಗಳು ಮಾತ್ರ ಋಣಾತ್ಮಕ ರನ್ ರೇಟ್ ಹೊಂದಿದ್ದು, ಮುಂದಿನ ಪಂದ್ಯಗಳನ್ನು ಗೆದ್ದರೂ ಈ ಅಂಶ ಮೂರು ತಂಡಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. 13 ಪಂದ್ಯಗಳನ್ನು ಆಡಿರುವ ಗುಜರಾತ್ ಟೈಟನ್ಸ್, 10 ಗೆಲುವಿನ ಮೂಲಕ 20 ಅಂಕಗಳೊಂದಿಗೆ ಮೊದಲ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಅಷ್ಟೇ ಪಂದ್ಯಗಳನ್ನು ಆಡಿರುವ ರಾಜಸ್ಥಾನ ಮತ್ತು ಲಕ್ನೋ ತಲಾ 8 ಗೆಲುವಿನೊಂದಿಗೆ 16 ಅಂಕಗಳನ್ನು ಹಂಚಿಕೊಂಡಿದೆ. ಎರಡೂ ತಂಡಗಳಿಗೆ ಲೀಗ್ ಹಂತದಲ್ಲಿ 1 ಪಂದ್ಯ ಬಾಕಿ ಉಳಿದಿದ್ದು, ಅಲ್ಲಿ ಗೆಲುವು ಸಾಧಿಸಿದರೆ ಪ್ಲೇ ಆಫ್ ಪ್ರವೇಶಿಸಲಿದೆ. ಸಂಜು ಸ್ಯಾಮ್ಸನ್ ಬಳಗ ತನ್ನ ಮುಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್, ಶ್ರೇಯಸ್ ಅಯ್ಯರ್ ಸಾರಥ್ಯದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದು, ಉಭಯ ತಂಡಗಳಿಗೂ ನಿರ್ಣಾಯಕ ಪಂದ್ಯವಾಗಲಿದೆ.

- Advertisement -


ಆರ್ಸಿಬಿ ಪ್ಲೇ ಆಫ್ ʻಲೆಕ್ಕಾಚಾರʼ
ಲೀಗ್ ಹಂತದಲ್ಲಿ 13 ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಗುರುವಾರ ನಡೆಯುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ, ಬಲಿಷ್ಠ ಗುಜರಾತ್ ತಂಡವನ್ನು ಬೃಹತ್ ಅಂತರದಲ್ಲಿ ಮಣಿಸಲೇಬೇಕಾದ ಒತ್ತಡ ಡುಪ್ಲೆಸಿಸ್ ಪಡೆಯ ಮೇಲಿದೆ.


ಟೈಟನ್ಸ್ ವಿರುದ್ಧದ ಪಂದ್ಯ ಗೆದ್ದರೂ ಆರ್ಸಿಬಿ ನಿಟ್ಟುಸಿರು ಬಿಡುವಂತಿಲ್ಲ. ಉಳಿದ ತಂಡಗಳ ಫಲಿತಾಂಶವೂ ಬೆಂಗಳೂರು ಪ್ಲೇ ಆಫ್ ಪ್ರವೇಶವನ್ನು ನಿರ್ಧರಿಸಲಿದೆ. ಪ್ರಮುಖವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ತಂಡದ ಫಲಿತಾಂಶ, ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಿದೆ. ಟೂರ್ನಿಯಲ್ಲಿ 12 ಪಂದ್ಯಗಳನ್ನು ಆಡಿರುವ ರಿಷಭ್ ಪಂತ್ ಬಳಗ, ತಲಾ 6 ಸೋಲು-ಗೆಲುವಿನ ಸವಿಯುಂಡಿದೆ. 13ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೊನೇಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಎದುರಿಸಲಿದೆ. ಪಂಜಾಬ್ ವಿರುದ್ಧ ಗೆಲುವು ಮತ್ತು ಮುಂಬೈ ವಿರುದ್ಧ ಡೆಲ್ಲಿ ಸೋಲು ಕಂಡರೆ ಆರ್ಸಿಬಿಗೆ ವರದಾನವಾಗಲಿದೆ.
ಆದರೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆದ್ದರೆ, ಅಂತಿಮ ಪಂದ್ಯದಲ್ಲಿ ಹೈದರಾಬಾದ್ , ಪಂಜಾಬ್ ತಂಡವನ್ನು ಮಣಿಸುವುದನ್ನು ಆರ್ಸಿಬಿ ಕಾಯಬೇಕಿದೆ. ಈ ಎಲ್ಲಾ ಲೆಕ್ಕಾಚಾರಗಳ ನಡುವೆಯೂ, ಆರ್ಸಿಬಿ ಟೈಟನ್ಸ್ ತಂಡವನ್ನು ಮಣಿಸಲೇಬೇಕಾದ ತೀವ್ರ ಒತ್ತಡಕ್ಕೆ ಸಿಲುಕಿದೆ.

Join Whatsapp