ಮೆಗಾ ಹರಾಜಿನಲ್ಲಿ ಮೂವರು ಆಟಗಾರರಿಗೆ 27 ಕೋಟಿ ರೂಪಾಯಿ ಮೀಸಲಿಟ್ಟ RCB ; ಯಾರು ಆ ಮೂವರು ಆಟಗಾರರು?

Prasthutha|

ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್-IPL 2022 ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರ ಮೆಗಾ ಹರಾಜು ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಲು ಮೆಗಾ ಹರಾಜಿಗಾಗಿ ಕಾಯುತ್ತಿವೆ. ಮತ್ತೊಂದೆಡೆ ಪ್ರತಿ ತಂಡಕ್ಕೆ 20ಕ್ಕೂ ಹೆಚ್ವಿನ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುವುದರಿಂದ ಸ್ಟಾರ್ ಹಾಗೂ ಯುವ ಆಟಗಾರರರಿಗೆ ಅದೃಷ್ಟ ಖುಲಾಯಿಸಲಿದೆ.
2008ರಲ್ಲಿ ಐಪಿಎಲ್ ಆರಂಭವಾದಗಿನಿಂದಲೂ ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗಾ ಹರಾಜಿನಲ್ಲಿ ಪ್ರಮುಖವಾಗಿ 3 ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸಿದೆ. ವಿರಾಟ್ ಕೊಹ್ಲಿ ನಾಯಕನ‌ ಸ್ಥಾನ ತ್ಯಜಿಸಿದ್ದು, ಮತ್ತೊಂದೆಡೆ ತಂಡದ ಬೆನ್ನೆಲುಬಾಗಿದ್ದ ಎಬಿಡಿ‌ ವಿಲಿಯರ್ಸ್ ಎಲ್ಲಾ ಆವೃತ್ತಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಈ ಬಾರಿಯ ಮೆಗಾ ಹರಾಜು RCB ಪಾಲಿಗೆ ನಿರ್ಣಾಯಕವಾಗಲಿದೆ.
ಪಿಟಿಐ ಸುದ್ದಿ ಸಂಸ್ಥೆಯ ಮೂಲಗಳ ಪ್ರಕಾರ ವೆಸ್ಟ್ ಇಂಡೀಸ್’ನ ಆಲ್ ರೌಂಡರ್ ಜೇಸನ್ ಹೋಲ್ಡರ್, ಟಿ-20 ಸ್ಪೆಷಲಿಸ್ಟ್ ಬ್ಯಾಟರ್ ಅಂಬಟಿ ರಾಯುಡು ಹಾಗೂ ಯುವ ಆಲ್ ರೌಂಡರ್ ರಿಯಾನ್ ಪರಾಗ್’ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ ಸಿಬಿ ಯೋಜನೆ ರೂಪಿಸಿದೆ ಎನ್ನಲಾಗಿದೆ. ಈ ಮೂವರಿಗಾಗಿ 27 ಕೋಟಿ ರೂಪಾಯಿ ಮೊತ್ತವನ್ನು ಹರಾಜಿನಲ್ಲಿ ವ್ಯಯಿಸಲು ನಿರ್ಧರಿಸಿದೆ. ಹೋಲ್ಡರ್’ಗೆ 12 ಕೋಟಿ, ರಾಯುಡುಗೆ 8 ಹಾಗೂ ಪರಾಗ್ ಮೇಲೆ 7 ಕೋಟಿ ರೂಪಾಯಿ ಬಿಡ್ ಮಾಡಲು ಪ್ಲಾನ್ ಮಾಡಲಾಗಿದೆ.
ಮೆಗಾ ಹರಾಜಿಗೆ ಆರ್’ಸಿಬಿ ಪರ್ಸ್’ನಲ್ಲಿ 57 ಕೋಟಿ ರೂಪಾಯಿ ಮೊತ್ತ ಲಭ್ಯವಿದ್ದು, ಇದರಲ್ಲಿ ಮೂರು ಪ್ರಮುಖ ಆಟಗಾರರಿಗೆ ಹೆಚ್ಚಿನ ಮೊತ್ತವನ್ನ ಮೀಸಲಿಡಲಾಗಿದೆ.
ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೂರ್ನಿಯಲ್ಲಿ ಹೋಲ್ಡರ್ ಡಬಲ್ ಹ್ಯಾಟ್ರಿಕ್ ಪಡೆಯುವ ಮೂಲಕ ತನ್ನ ತಂಡ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
35 ವರ್ಷದ ರಾಯುಡು 5 ಬಾರಿ ಐಪಿಎಲ್ ಚಾಂಪಿಯನ್ ತಂಡದ ಭಾಗವಾಗಿದ್ದಾರೆ. 2013, 2015 ಹಾಗೂ 2017ರಲ್ಲಿ‌ ಮುಂಬೈ ಇಂಡಿಯನ್ಸ್ ಹಾಗೂ 2018, 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆದಾಗಲೂ ಅಂಬಟಿ ರಾಯುಡು ತಂಡದಲ್ಲಿದ್ದರು.

Join Whatsapp