ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಏಳು ಸದಸ್ಯರ ಸಮಿತಿಯನ್ನು ರಚಿಸಿದೆ.
‘ಬ್ರಿಜ್‌ಭೂಷಣ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಶೀಘ್ರದಲ್ಲೇ ಸಮಿತಿಯನ್ನು ನೇಮಕ ಮಾಡಬೇಕು’ ಎಂದು ಕುಸ್ತಿಪಟುಗಳು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಅವರನ್ನು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಪಿ.ಟಿ.ಉಷಾ ನೇತೃತ್ವದಲ್ಲಿ ಶುಕ್ರವಾರ ತುರ್ತು ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೂಟರ್ ಅಭಿನವ್ ಬಿಂದ್ರಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ಬಾಕ್ಸರ್ ಎಂ.ಸಿ.ಮೇರಿಕೋಮ್, ಕುಸ್ತಿಪಟು ಯೋಗೇಶ್ವರ್ ದತ್, ಆರ್ಚರಿ ಸ್ಪರ್ಧಿ ಡೋಲಾ ಬ್ಯಾನರ್ಜಿ ಮತ್ತು ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್ ಅಧ್ಯಕ್ಷ ಸಹದೇವ್ ಯಾದವ್ ಅವರು ಸಮಿತಿಯಲ್ಲಿದ್ದಾರೆ.