ನಿವೃತ್ತ ಅಧಿಕಾರಿಯ ನೇತೃತ್ವದಲ್ಲಿ ಅರ್ಜುನ ಸಾವಿನ ತನಿಖೆ: ಈಶ್ವರ ಖಂಡ್ರೆ

Prasthutha|

ಸಕಲೇಶಪುರ: ಅರ್ಜುನ ಆನೆಯ ಸಾವಿನ ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ನಿವೃತ್ತ ಅಧಿಕಾರಿ ನೇತೃತ್ವದ ತನಿಖಾ ಸಮಿತಿ ರಚಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಅರ್ಜುನ ಆನೆ ಮೃತಪಟ್ಟ ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

- Advertisement -

ನವೆಂಬರ್ ತಿಂಗಳಲ್ಲಿ ಒಂದೇ ವಾರದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಕಾಡಾನೆ ಸೆರೆಗೆ ಒತ್ತಾಯ ಕೇಳಿ ಬಂದಿವೆ. ಆದ್ದರಿಂದ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ನ.24 ರಿಂದ ಆರಂಬಿಸಲಾಗಿತ್ತು ಸಚಿವರು ಎಂದಿದ್ದಾರೆ

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಗತ್ಯವಿರುವ ಎಲ್ಲ ಪೂರ್ವ ತಯಾರಿಗಳನ್ನು ನಡೆಸಲಾಗಿದ್ದರೂ ಅರ್ಜುನನ ಸಾವು ಸಂಭವಿಸಿದೆ. ಇದು ನನಗೆ ತೀವ್ರ ನೋವು ತಂದಿದೆ. ಅರ್ಜುನ ಆನೆ ಅಂತ್ಯಸಂಸ್ಕಾರದ ವೇಳೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಲ್ಲೂ ಗುಂಡು ತಗುಲಿರುವ ಗುರುತು ಪತ್ತೆಯಾಗಿಲ್ಲ. ಆದರೂ ಅರ್ಜುನ ಆನೆ ಸಾವಿನ ಬಗ್ಗೆ ಹಲವು ಅನುಮಾನ ಹಾಗೂ ಅಪಸ್ವರಗಳು ಎದ್ದಿರುವುದರಿಂದ ಈಗಾಗಲೇ ರಚನೆಯಾಗಿರುವ ತನಿಖಾ ಸಮಿತಿ ಸದಸ್ಯರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ನಂತರ ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಖಂಡಿತವಾಗಿಯೂ ಆಗಲಿದೆ ಸಚಿವರು ಹೇಳಿದ್ದಾರೆ.

- Advertisement -

ಕಾಡಾನೆ ಸೆರೆ ಕಾರ್ಯಾಚರಣೆಗಾಗಿ ಅರವಳಿಕೆ ತಜ್ಞರಿಗೆ ಸರ್ಕಾರದಿಂದ ತರಬೇತಿ ನೀಡಲಾಗುವುದು. ಮುಂದಿನ ಕಾಡಾನೆ ಸೆರೆ ಕಾರ್ಯಾಚರಣೆಗೆ ದಿನಾಂಕವನ್ನು ಅಧಿಕಾರಿಗಳು ಹಾಗೂ ತಜ್ಞರ ಸಮ್ಮುಖದಲ್ಲಿ ಚರ್ಚಿಸಿದ ನಂತರ ಪ್ರಕಟಿಸಲಾಗುವುದು. ಈ ವೇಳೆ ದ್ರೋಣ ಆನೆಯ ಬಳಕೆಯ ಬಗ್ಗೆ ಚಿಂತಿಸಲಾಗುತ್ತಿದೆ. ೬೫ ವರ್ಷ ಮೆಲ್ಪಟ್ಟ ಆನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸದಂತೆ ಕೇಂದ್ರ ಸರ್ಕಾರದ ನಿಯಮವಿದೆ. ಆದರೆ, ನನ್ನ ವೈಯಕ್ತಿಕ ಅಭಿಪ್ರಾಯದಂತೆ ೬೦ ವರ್ಷ ಮೇಲ್ಪಟ್ಟ ಆನೆಗಳನ್ನು ಕಾರ್ಯಾಚರಣೆಗೆ ಇಳಿಸದಿರುವುದು ಸೂಕ್ತ ಎಂದರು.



Join Whatsapp