ಕಾಮಗಾರಿಗಳಲ್ಲಿ ಶೇಕಡಾ 40 ಲಂಚ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಯಲಿ: ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

Prasthutha|

► ಅಪೌಷ್ಟಿಕತೆ ನಿವಾರಣೆಗೆ ಮಕ್ಕಳಿಗೆ ಮೊಟ್ಟೆಯ ಜೊತೆ ಮಾಂಸವನ್ನೂ ನೀಡಬೇಕು

- Advertisement -

ದಾವಣಗೆರೆ: ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಶೇಕಡ 40ರಷ್ಟು ಲಂಚ ನೀಡಬೇಕಾದ ಪರಿಸ್ಥಿತಿಯಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದು ಬಹಿರಂಗಗೊಂಡಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ,ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ನಡೆದ ಎಲ್ಲಾ ಕಾಮಗಾರಿಗಳ ಬಗ್ಗೆ ಹೈಕೋರ್ಟಿನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.


ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ, ಅಬ್ದುಲ್ ಮಜೀದ್ ಮೈಸೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಇದೇ ಪ್ರಥಮ ಬಾರಿಗೆ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿದ ವೇಳೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ರಾಜ್ಯ ಸರಕಾರದ ವೈಫಲ್ಯತೆಗಳ ಬಗ್ಗೆ ಬೆಳಕು ಚೆಲ್ಲಿದರು.

- Advertisement -


ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅಧಿಕಾರ ದುರ್ಬಳಕೆಯಾಗುತ್ತಲೇ ಇವೆ. ಕಾಮಗಾರಿಯಲ್ಲಿ ಶೇ.40ರಷ್ಟು ಕಮಿಷನ್ ಪಡೆಯುತ್ತಿರುವುದು ಬಹಿರಂಗಗೊಂಡಿದೆ. ಕರ್ನಾಟಕದಲ್ಲಿ ಸರಕಾರಿ ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸ ಬೇಕೆಂಬ ಉದ್ದೇಶದಿಂದ ಕೊಡಲಾಗುತ್ತಿದ್ದ ಮೊಟ್ಟೆಯನ್ನು ಕೊಡ ಬಾರದೆಂದು ಮೇಲ್ವರ್ಗದ ಸಂಘಟನೆಗಳು ಮತ್ತು ಸಂಘಪರಿವಾರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ಹೇಳಿದರು.


ಬಾಲ್ಯದ ಅಪೌಷ್ಟಿಕತೆಯನ್ನು ಎದುರಿಸಲು ಮೊಟ್ಟೆಗಳೊಂದಿಗೆ ಸರ್ಕಾರವು ಮಾಂಸವನ್ನು ಸೇರಿಸಬೇಕು. ಹೆಚ್ಚಿನ ಯುವಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ಇದು ವಿಟಮಿನ್ ಬಿ 12 ಕೊರತೆಯಿಂದ ಉಂಟಾಗುತ್ತದೆ, ಇದನ್ನು ಹೆಚ್ಚು ಮಾಂಸಾಹಾರ ಸೇವನೆಯಿಂದ ನಿವಾರಿಸಬಹುದು. ಕೆಲವೇ ಜನರು ಇಷ್ಟಪಡದ ಕಾರಣದಿಂದ ಹೆಚ್ಚಿನ ಮಕ್ಕಳಿಗೆ ಅವರ ಆಯ್ಕೆಯ ಪೌಷ್ಟಿಕಾಂಶದ ಆಹಾರದ ದೊರೆಯುವ ಅವಕಾಶಕ್ಕೆ ಸರ್ಕಾರವು ನಿರಾಕರಿಸುವುದು ಅಮಾನವೀಯತೆಯನ್ನು ಮೆರೆದಂತೆ. ಸರ್ಕಾರ ತನ್ನ ಮೇಲ್ವರ್ಗದ ಬೇಡಿಕೆಗೆ ಮಣಿದು ಮೊಟ್ಟೆ ನೀಡುವ ನಿರ್ಧಾರವನ್ನು ಹಿಂತೆಗೆದುಕೊಂಡರೆ ಕಾನೂನು ಹೋರಾಟ ಮತ್ತು ರಾಜ್ಯಾದ್ಯಂತ ತಳ ಸಮುದಾಯಗಳನ್ನು ಒಗ್ಗೂಡಿಸಿ ಹೋರಾಟ ನಡೆಸಲಿದೆ ಎಂದರು.


ರಾಜ್ಯದಲ್ಲಿ ಅತಿಯಾದ ಮಳೆಯಿಂದ ಅಪಾರ ಹಾನಿ, ಸರಕಾರ 5000 ಕೋಟಿ ಪರಿಹಾರ ಘೋಷಿಸಬೇಕು. ಕೆಲವು ದಿನಗಳಿಂದ ನಿರಂತರವಾಗಿ ಮಳೆ ಬಿದ್ದ ಕಾರಣ ರೈತರ ಸಾಕಷ್ಟು ಬೆಳೆ ಹಾನಿಯಾಗಿದೆ. ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರವರ ಹೇಳಿಕೆಯಂತೆ 11 ಲಕ್ಷದ 3,555 ಹೆಕ್ಚರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇಷ್ಟಾದರೂ ಸರ್ಕಾರ ಕೇವಲ ಪರಿಹಾರದ ಘೋಷಣೆ ಕೂಗುತ್ತಿರುವುದು ಅಸಮಂಜಸ. ಮಳೆ ಹಾನಿ ಕೇವಲ ಕೃಷಿ ಭೂಮಿಗೆ ಸೀಮಿತವಾಗಿಲ್ಲ. ಗ್ರಾಮಾಂತರ ಪ್ರದೇಶಗಳು ಸೇರಿದಂತೆ ನಗರ/ಪಟ್ಟಣ ಪ್ರದೇಶಗಳಲ್ಲೂ ಅಪಾರವಾದ ನಷ್ಟವಾಗಿದೆ. ಎಷ್ಟು ಮಂದಿ ತಮ್ಮ ಮನೆಗಳನ್ನು ಕಳೆದು ಕೊಂಡು ಬೀದಿಪಾಲಾಗಿದ್ದಾರೆ. ಇಷ್ಟು ದೊಡ್ಡ ಅನಾಹುತಕ್ಕೆ ಸರ್ಕಾರ ಕೇವಲ 418 ಕೋಟಿ ಪರಿಹಾರ ಘೋಷಣೆ ಮಾಡಿರುವುದು ಅವೈಜ್ಞಾನಿಕವಾದ ತೀರ್ಪು. ವಾಸ್ತವಂಶವನ್ನು ತಿಳಿದು ಕೊಂಡು ನಷ್ಟದ ಸಂಪೂರ್ಣ ಭಾಗವಾಗಿ 5000 ಕೋಟಿ ಪರಿಹಾರ ಕೊಡ ಬೇಕು. ತುರ್ತಾಗಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸ ಬೇಕು. ಬೆಳೆ ಮಿಮೆ ಯಾವಾಗ ಎಂದು ಸರ್ಕಾರಕ್ಕೆ ಪ್ರಶ್ನಿಸಿದರೆ ಕಂಪನಿಗಳ ಜೊತೆ ಸಮಾಲೋಚನೆ ನಡೆಸುತ್ತೇವೆ ಎಂದು ಹಗುರವಾದ ಉತ್ತರ ಕೊಡುವುದನ್ನು ಸರ್ಕಾರ ನಿಲ್ಲಿಸ ಬೇಕು. ಸಮಸ್ಯೆಗೆ ಪರಿಹಾರದ ಭಾಗವಾಗಿ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸ ಬೇಕು ಎಂದು ಹೇಳಿದರು.


ರಾಜ್ಯದಲ್ಲಿ ಭೂರಹಿತ ಮತ್ತು ವಸತಿ ರಹಿತ ಜನರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ. ಸರಕಾರ ಕೂಡಲೇ ಬಡ ರೈತ, ಕೂಲಿ ಕಾರ್ಮಿಕರಿಗೆ ಭೂ ಹಂಚಿಕೆ ಮಾಡಬೇಕು. ಸರ್ಕಾರಿ ಭೂಮಿ ಒತ್ತುವರಿ ಮಾಡಿದ ಭೂಮಾಲೀಕರ ಭೂಮಿ ವಾಪಸ್ ಪಡೆದು ಬಡವರಿಗೆ ಹಂಚಬೇಕು. ಗೃಹಮಂಡಳಿ ಮಧ್ಯಮವರ್ಗಗಳ ಗೃಹ ವಿತರಣೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲ . ವಸತಿ ಯೋಜನೆಗಳ ನಿಧಿ ಕೂಡಲೇ ಬಿಡುಗಡೆ ಮಾಡಬೇಕು. ವಸತಿ – ಭೂಮಿ ಹಂಚಿಕೆಯಲ್ಲಿ ರಾಜಕೀಯ ಪ್ರಭಾವ , ಜಾತಿ ಧರ್ಮ ತಾರತಮ್ಯ ಮಾಡಬಾರದೆಂದು ಅಬ್ದುಲ್ ಮಜೀದ್ ಆಗ್ರಹಿಸಿದರು.


ಪತ್ರಿಕಾ ಗೋಷ್ಠಿಯಲ್ಲಿ ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಜಬಿವುಲ್ಲಾ, ಜಿಲ್ಲಾ ಉಪಾಧ್ಯಕ್ಷ ರಝ್ವಿ ರಿಯಾಝ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್ ಉಪಸ್ಥಿತರಿದ್ದರು.

Join Whatsapp