ಜೈಪುರ: ರಾಜ್ಯಸಭೆಯ 16 ಸ್ಥಾನಗಳಿಗೆ 4 ರಾಜ್ಯದಲ್ಲಿ ಇಂದು ಮತದಾನ ಆರಂಭವಾಗಿದ್ದು, ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುವ ಭೀತಿಯಿಂದ ರಾಜಸ್ಥಾನ ಸರ್ಕಾರವು ಜೈಪುರ ಜಿಲ್ಲೆಯ ಅಮೇರ್ ಪ್ರದೇಶದಲ್ಲಿ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದೆ.
ಕಾಂಗ್ರೆಸ್ ತನ್ನೆಲ್ಲಾ ಶಾಸಕರನ್ನು ಅಮೇರ್ ಪ್ರದೇಶದ ಹೋಟೆಲ್ ಲೀಲಾಗೆ ಸ್ಥಳಾಂತರಿಸಿದ್ದು, ಅಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಧ್ವನಿ ಕರೆಗಳು ಮತ್ತು ಬ್ರಾಡ್ಬ್ಯಾಂ ಡ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿಲ್ಲ ಎನ್ನಲಾಗಿದೆ. ಜೈಪುರದ ಅಮೇರ್ ಪ್ರದೇಶದಲ್ಲಿ ತಂಗಿರುವ ಕೈ ಶಾಸಕರಿಗೆ ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು ಚರ್ಚೆಗೆ ಕಾರಣವಾಗಿದೆ.
108 ಶಾಸಕರ ಬಲವನ್ನು ಹೊಂದಿರುವ ಕಾಂಗ್ರೆಸ್ಸಿಗೆ ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಖಚಿತವಾಗಿದೆ. ಒಬ್ಬ ಅಭ್ಯರ್ಥಿ ಗೆಲ್ಲಲು 41 ಮತಗಳ ಅಗತ್ಯವಿದೆ, 26 ಹೆಚ್ಚುವರಿ ಮತಗಳಿದ್ದು 3ನೇ ಅಭ್ಯರ್ಥಿ ಗೆಲ್ಲಲು 15 ಮತಗಳ ಕೊರತೆಯಿದೆ. ಬಿಜೆಪಿ 71 ಶಾಸಕರ ಬಲವನ್ನು ಹೊಂದಿದ್ದು 1 ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ. ನಂತರ 30 ಹೆಚ್ಚುವರಿ ಮತಗಳಿವೆ. ಹೀಗಾಗಿ ಅಡ್ಡ ಮತದಾನ ಭೀತಿ ಕಾಂಗ್ರೆಸ್ಸಿಗಿದೆ.