ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ: ಮೋದಿ ಅಭಿನಂದನೆ

Prasthutha|

ಢಾಕಾ: ಶೇಖ್ ಹಸೀನಾ ಪದಚ್ಯುತಿಯ ನಂತರ ಬಾಂಗ್ಲಾದಲ್ಲಿ ಆರ್ಥಿಕ ತಜ್ಞ,ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.

- Advertisement -

ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮುಹಮ್ಮದ್ ಯೂನುಸ್ ಪ್ರಮಾಣವಚನ ಸ್ವೀಕರಿಸಿದ್ದು, ನಾನು ಸಂವಿಧಾನವನ್ನು ಎತ್ತಿಹಿಡಿಯುತ್ತೇನೆ, ಬೆಂಬಲಿಸುತ್ತೇನೆ ಮತ್ತು ರಕ್ಷಿಸುತ್ತೇನೆ. ನನ್ನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

84 ವರ್ಷದ ಮುಹಮ್ಮದ್ ಯೂನುಸ್ ಬಾಂಗ್ಲಾದಲ್ಲಿ ಮೈಕ್ರೀ ಕ್ರೆಡಿಟ್, ಮೈಕ್ರೋಫೈನಾನ್ಸ್ ಪ್ರವರ್ತಕರಾಗಿದ್ದು ತಮ್ಮ ಪರಿಕಲ್ಪನೆಯ ಗ್ರಾಮೀಣ್ ಬ್ಯಾಂಕ್ ಆರ್ಥಿಕತೆ ಮೂಲಕ ಖ್ಯಾತಿ ಗಳಿಸಿದ್ದರು. 2006 ರಲ್ಲಿ ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಬಡವರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ನೊಬೆಲ್​ ಶಾಂತಿ ಪ್ರಶಸ್ತಿ ಸಿಕ್ಕಿದೆ. ಯೂನಸ್ 2007 ರಲ್ಲಿ ತನ್ನ ನಾಗೋರಿಕ್ ಶಕ್ತಿ (ನಾಗರಿಕ ಶಕ್ತಿ) ಪಕ್ಷವನ್ನು ಸ್ಥಾಪಿಸುವ ಮೂಲಕ ಬಾಂಗ್ಲಾದೇಶದ ರಾಜಕೀಯವನ್ನು ಪ್ರವೇಶಿಸಿದರು. ತುರ್ತು ಪರಿಸ್ಥಿತಿ ಮತ್ತು ಶೇಖ್ ಹಸೀನಾ ಅವರ ಅವಾಮಿ ಲೀಗ್ ಮತ್ತು ಖಲೀದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿ (BNP) ನಡುವಿನ ತೀವ್ರ ಸಂಘರ್ಷದ ನಡುವೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದರು. ಬೆಂಬಲದ ಕೊರತೆಯಿಂದ ಪಕ್ಷವನ್ನು ಸ್ಥಾಪಿಸುವ ತಮ್ಮ ಪ್ರಯತ್ನಗಳನ್ನು ಕೈಬಿಟ್ಟರು. ಹಸೀನಾ ಅವರ ಸರ್ಕಾರವನ್ನು ತೀವ್ರವಾಗಿ ಟೀಕಿಸುವ ಮೂಲಕ ರಾಜಕೀಯದಲ್ಲಿ ಸಕ್ರಿಯವಾದರು.

- Advertisement -

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ಯೂನಸ್ ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಈ ಬಗ್ಗೆ ‘X’ ಮಾಡಿರುವ ಪ್ರಧಾನಿ ಮೋದಿ, ಬಾಂಗ್ಲಾದೇಶದಲ್ಲಿ ಸಹಜತೆ ಶೀಘ್ರವಾಗಿ ಮರುಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ಭಾರತಕ್ಕೆ ಇದೆ. ಅಲ್ಲಿ ಸಹಜ ಸ್ಥಿತಿಗೆ ಎಲ್ಲವೂ ಮರಳಿದರೆ ಹಿಂದೂಗಳೂ ಸೇರಿದಂತೆ ಇತರ ಅಲ್ಪಸಂಖ್ಯಾತರ ರಕ್ಷಣೆಯು ಖಾತ್ರಿಯಾಗಲಿದೆ ಎಂದು ಹೇಳಿದ್ದಾರೆ.

ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಬಾಂಗ್ಲಾದಲ್ಲಿ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ಹಿಂಸಾಚಾರಕ್ಕೆ ತಿರುಗಿ, ಶೇಖ್ ಹಸೀನಾ ಸೋಮವಾರದಂದು ರಾಜೀನಾಮೆ ನೀಡಿ ದೇಶ ತೊರೆದು ತಾತ್ಕಾಲಿಕವಾಗಿ ಭಾರತದಲ್ಲಿದ್ದಾರೆ.

ಶೇಖ್ ಹಸೀನಾ ಅವರು ಪ್ರಜಾತಂತ್ರದ ಮರುಸ್ಥಾಪನೆ ಆದ ನಂತರ ದೇಶಕ್ಕೆ ಮರಳಲಿದ್ದಾರೆ ಎಂದು ಅವರ ಮಗ ಸಾಜೀಬ್ ವಾಜೆದ್ ಜಾಯ್ ಹೇಳಿದ್ದಾರೆ.



Join Whatsapp