ಗುವಾಹಟಿ: ಗುವಾಹಟಿಯಿಂದ ಶಿಲ್ಲಾಂಗ್ ಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ತಮಿಳುನಾಡಿನ 18 ವರ್ಷದ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಲನ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಟೇಬಲ್ ಟೆನಿಸ್ ಫೆಡರೇಷನ್ ಆಫ್ ಇಂಡಿಯಾ (ಟಿಟಿಎಫ್ಐ) ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರದಿಂದ ಆರಂಭವಾಗಲಿರುವ 83ನೇ ಸೀನಿಯರ್ ರಾಷ್ಟ್ರೀಯ ಮತ್ತು ಅಂತಾರರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ ಗಾಗಿ ಗುವಾಹಟಿಯಿಂದ ಶಿಲ್ಲಾಂಗ್ ಗೆ ದೀನದಯಾಲನ್ ಮತ್ತು ಮೂವರು ಆಟಗಾರರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಮದು ತಿಳಿದು ಬಂದಿದೆ.
ಘಟನೆಯಲ್ಲಿ ಇತರ ಮೂವರಿಗೆ ತೀವ್ರ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು ವಿಶ್ವ ಅವರನ್ನು ಈಶಾನ್ಯ ಇಂದಿರಾ ಗಾಂಧಿ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮೆಡಿಕಲ್ ಸೈನ್ಸಸ್ ಸಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಭಾರತದ ಭರವಸೆಯ ಆಟಗಾರ ವಿಶ್ವ ಹಲವಾರು ರಾಷ್ಟ್ರೀಯ ರಾಂಕಿಂಗ್ ಪ್ರಶಸ್ತಿಗಳು ಮತ್ತು ಅಂತಾರಾಷ್ಟ್ರೀಯ ಪದಕಗಳನ್ನು ಪಡೆದಿದ್ದು ಏಪ್ರಿಲ್ 27 ರಿಂದ ಆಸ್ಟ್ರಿಯಾದ ಲಿನ್ಜ್ನಲ್ಲಿ ಡಬ್ಲ್ಯುಟಿಟಿ ಯೂತ್ ಸ್ಪರ್ಧಿಯಲ್ಲಿ ಭಾರತವನ್ನು ಪ್ರತಿನಿಧಿಸಬೇಕಾಗಿತ್ತು. ಅಣ್ಣಾ ನಗರದ ಕೃಷ್ಣಸ್ವಾಮಿ ಟಿಟಿ ಕ್ಲಬ್ ನ ಉತ್ಪನ್ನವಾದ ವಿಶ್ವ, ರಾಮನಾಥ್ ಪ್ರಸಾದ್ ಎಂಬವರಿಂದ ತರಬೇತಿ ಪಡೆಯುತ್ತಿದ್ದರು.
ವಿಶ್ವ ಸಾವಿಗೆ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.