ಗಾಝಾದ ಮೇಲೆ ತೀವ್ರಗೊಂಡ ಇಸ್ರೇಲ್‌ ದಾಳಿ

Prasthutha|

ಗಾಝಾ: ಇಸ್ರೇಲ್‌ನ ಪಡೆಗಳು ಗಾಝಾದಾದ್ಯಂತ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಗಾಝಾದ ಎರಡನೇ ಅತಿ ದೊಡ್ಡ ನಗರ ಖಾನ್‌ ಯೂನಿಸ್‌ನಲ್ಲಿ ಭೂ ಕಾರ್ಯಾಚರಣೆಯನ್ನು ವೇಗಗೊಳಿಸಿದೆ. ದಕ್ಷಿಣ ಗಾಝಾ ಪಟ್ಟಿಯ ಖಾನ್‌ ಯೂನಿಸ್‌ ನಗರದ ಹೃದಯಭಾಗಕ್ಕೆ ತಲುಪಿದ್ದೇವೆ. ಭೂ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಇಸ್ರೇಲ್‌ನ ಸಶಸ್ತ್ರ ಪಡೆಗಳು ಹೇಳಿದ್ದು ವರದಿಯಾಗಿದೆ.

- Advertisement -

ಇದರಿಂದಾಗಿ ಗಾಝಾದ ಜನಜೀವನ ಬಹಳ ಕಷ್ಟಕರವಾಗಿದೆ, ರೋಗಿಗಳ ಆರೈಕೆಗೆ ತೊಡಕಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಮೂರು ದಿವಸಗಳಿಂದ ರಫಾ ನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರ ಆಹಾರ, ನೀರು ಸರಬರಾಜು ಮಾಡಲು ಸಾಧ್ಯವಾಗಿದೆ. ಇಸ್ರೇಲ್‌ ಪಡೆಗಳು ವಾಹನ ಸಂಚಾರಕ್ಕೆ ತಡೆಯುಂಟು ಮಾಡಿರುವುದರಿಂದ ಬೇರೆಡೆಗೆ ನೆರವು ತಲುಪಿಸಲು ಸಾಧ್ಯವಾಗಿಲ್ಲ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಡೇರ್ ಅಲ್ ಬಾಲಾಹ್ ನಗರದ ಅಲ್-ಅಕ್ಸಾ ಆಸ್ಪತ್ರೆಗೆ ಔಷಧ ಹಾಗೂ ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಹರಸಾಹಸ ಪಡಬೇಕಾಗಿದೆ. ಡಿಸೆಂಬರ್‌ 1ರಿಂದ ಈ ಆಸ್ಪತ್ರೆಗೆ ಪ್ರತಿ ದಿನ 200ಕ್ಕೂ ಹೆಚ್ಚು ಗಾಯಾಳುಗಳು ದಾಖಲಾಗುತ್ತಿದ್ದಾರೆ‌. ಗಾಝಾದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿರುವ ಕಾರಣ ಜೀವರಕ್ಷಕ ಉಪಕರಣಗಳು ಕಾರ್ಯನಿರ್ವಹಿಸುತ್ತಿಲ್ಲ. ರಕ್ತದಾನ ಕೂಡ ನಿಂತಿದೆ ಎಂದು ತುರ್ತು ಸೇವೆಗಳ ಸಂಯೋಜಕಿ ಮೇರಿ ಔರೆ ಹೇಳಿದ್ದಾರೆ.

- Advertisement -

ದಕ್ಷಿಣ ಗಾಝಾದ ಮೇಲೆ ದಾಳಿ ತೀವ್ರಗೊಳ್ಳುತ್ತಿದ್ದಂತೆ ನಾಗರಿಕರು ಕರಾವಳಿ ಪ್ರದೇಶಗಳತ್ತ ತೆರಳುತ್ತಿರುವ ದೃಶ್ಯ ಕಂಡುಬಂದಿದೆ. ಈಗಾಗಲೇ 18 ಲಕ್ಷಕ್ಕೂ ಹೆಚ್ಚು ಜನರು ಗಾಝಾದಿಂದ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.



Join Whatsapp