ಬೆಂಗಳೂರು : ಕೇಂದ್ರ ಗುಪ್ತಚರ ಸಂಸ್ಥೆಯ ನಿರ್ದೇಶನದಂತೆ ಕರ್ನಾಟಕದಲ್ಲಿರುವ ಮದರಸಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಗುಪ್ತಚರ ಸಂಸ್ಥೆಯ ಕಾರ್ಯಕ್ಕೆ ಮುಸ್ಲಿಂ ಸಮುದಾಯದಿಂದ ವ್ಯಾಪಕ ವಿರೋಧ ಮತ್ತು ಆಕ್ಷೇಪಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮದರಸಗಳ ಮಾಹಿತಿ ಸಂಗ್ರಹದಿಂದ ಹಿಂದೆ ಸರಿಯಲು ರಾಜ್ಯ ಗುಪ್ತಚರ ಸಂಸ್ಥೆ ನಿರ್ಧರಿಸಿದೆ ಎಂದು ಪ್ರಸ್ತುತ ನ್ಯೂಸ್‌ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ವಕ್ಫ್ ಆಸ್ತಿಗಳ ವಿವಾದದಿಂದಾಗಿ ಮುಸ್ಲಿಂ ಸಮುದಾಯ ಆತಂಕದಲ್ಲಿರುವಾಗಲೇ ರಾಜ್ಯದ ಮದರಸಗಳ ಮಾಹಿತಿ ಸಂಗ್ರಹಕ್ಕೆ ಗುಪ್ತಚರ ಸಂಸ್ಥೆ ಮುಂದಾಗಿರುವುದು ಮುಸ್ಲಿಮರ ಆತಂಕವನ್ನು ಇನ್ನಷ್ಟು ಹೆಚ್ಷಿಸಿದೆ ಎಂದು ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಬಗ್ಗೆ ಸರ್ಕಾರಕ್ಕೆ ಸಂಬಂಧಪಟ್ಟವರು ಗುಪ್ತಚರ ಸಂಸ್ಥೆಯಿಂದ ಮಾಹಿತಿ ಕೇಳಿದ್ದು, ಕೇಂದ್ರ ಗುಪ್ತಚರ ಸಂಸ್ಥೆಯ ನಿರ್ದೇಶನದಂತೆ ನಾವು ಮದರಸಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿರುವುದಾಗಿ ರಾಜ್ಯ ಗುಪ್ತಚರ ಸಂಸ್ಥೆಯ ನಿರ್ದೇಶಕರು ಮಾಹಿತಿ ನೀಡಿದ್ದಾರೆ ಎಂದು ಪ್ರಸ್ತುತ ನ್ಯೂಸ್‌ಗೆ ತಿಳಿದುಬಂದಿದೆ.
ಕೇಂದ್ರ ಸರ್ಕಾರ ವರ್ಷದ ಹಿಂದೆಯೇ ಮಾಹಿತಿ ಕೇಳಿರುವಾಗ ಇಷ್ಟು ಸಮಯ ಸುಮ್ಮನಿದ್ದು, ರಾಜ್ಯದಲ್ಲಿ ವಕ್ಫ್ ವಿವಾದ ತಲೆದೋರಿರುವ ಸಮಯದಲ್ಲಿ ಮದರಸಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿರುವುದರ ಔಚಿತ್ಯವೇನು ಎಂದು ಗುಪ್ತದಳವನ್ನು ಪ್ರಶ್ನಿಸಲಾಗಿದೆ. ಮುಸ್ಲಿಮರಲ್ಲಿ ವಕ್ಫ್ ಆತಂಕ ಮನೆಮಾಡಿರುವಾಗ ಮದರಸಗಳ ಮಾಹಿತಿ ಸಂಗ್ರಹಿಸುವುದರಿಂದ ಮುಸ್ಲಿಂ ಸಮುದಾಯದಲ್ಲಿ ಆತಂಕ ಹೆಚ್ಚಾಗುತ್ತದೆ. ಈ ಕಾರ್ಯದಿಂದ ಹಿಂದಕ್ಕೆ ಸರಿಯುವುದು ಉತ್ತಮ ಎಂದು ಗುಪ್ತದಳಕ್ಕೆ ಸರ್ಕಾರದ ಪ್ರಭಾವಿಗಳು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆ ಮನವಿಯನ್ನು ಪುರಸ್ಕರಿಸಿ ಸದ್ಯಕ್ಕೆ ಮದರಸಗಳ ಮಾಹಿತಿ ಸಂಗ್ರಹದಿಂದ ಹಿಂದೆ ಸರಿಯಲು ಗುಪ್ತಚರ ಸಂಸ್ಥೆ ನಿರ್ಧರಿಸಿದೆ ಎಂದು ಪ್ರಭಾವಿ ಕಾಂಗ್ರೆಸ್ ಮುಖಂಡೊರಬ್ಬರು ಪ್ರಸ್ತುತ ನ್ಯೂಸ್‌ಗೆ ತಿಳಿಸಿದ್ದಾರೆ.
ನಾಳೆ ಮುಸ್ಲಿಂ ಮುಖಂಡರ ನಿಯೋಗದಿಂದ ಮಂಗಳೂರು ಪೊಲೀಸ್ ಕಮಿಷನರ್ ಭೇಟಿ
ಮದರಸಗಳ ಮಾಹಿತಿ ಸಂಗ್ರಹ ವಿಚಾರಕ್ಕೆ ಸಂಬಂಧಿಸಿ ನಾಳೆ ಬೆಳಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನಿರ್ಧರಿಸಿದೆ. ಘಟಕದ ಅಧ್ಯಕ್ಷರಾದ ಕೆ.ಕೆ ಶಾಹುಲ್ ಹಮೀದ್ ನೇತೃತ್ವದ ನಿಯೋಗ ನಾಳೆ ಬೆಳಗ್ಗೆ 10 ಗಂಟೆಗೆ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರನ್ನು ಭೇಟಿಯಾಗಲಿದೆ ಎಂದು ತಿಳಿದುಬಂದಿದೆ. ಗುಪ್ತಚರ ಇಲಾಖೆಯ ಸೂಚನೆಯ ಹಿನ್ನೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಮದರಸಗಳ ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರ ನಿಯೋಗ ಪೊಲೀಸ್ ಆಯುಕ್ತರನ್ನು ಭೇಟಿಗೆ ನಿರ್ಧರಿಸಿದೆ.