ಬೆಂಗಳೂರು: ಆಯವ್ಯಯ ಘೋಷಣೆಯಂತೆ ಪ್ರತಿ ವಿಭಾಗದಲ್ಲಿ ಒಂದು ಪರಿಸರ ಸ್ನೇಹಿ ಸ್ಮಾರ್ಟ್ ಇಂಟೆಗ್ರೇಟೆಡ್ ಟೌನ್ ಶಿಪ್ ಯೋಜನೆ ಜಾರಿಗೆ ನಗರ ಯೋಜನೆಯಲ್ಲಿ ಪರಿಣತಿ ಹೊಂದಿದ ವಿಶ್ವವಿದ್ಯಾಲಯಗಳ ಸಹಯೋಗ ಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಇಂಟೆಗ್ರೇಟೆಡ್ ಟೌನ್ ಶಿಪ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು. ಸಿಂಗಾಪೂರ್ ವಿಶ್ವವಿದ್ಯಾಲಯ ಮತ್ತು ಇತರ ಕೆಲವು ವಿಶ್ವವಿದ್ಯಾಲಯಗಳು ನಗರ ಯೋಜನೆಯಲ್ಲಿ ವಿಶೇಷ ಪರಿಣತಿ ಹೊಂದಿವೆ. ಅವುಗಳ ನೆರವು ಪಡೆಯುವಂತೆ ಸೂಚಿಸದರು.
ಈ ಟೌನ್ ಶಿಪ್ ಗಳು ಪರಿಸರ ಸ್ನೇಹಿ ಹಾಗೂ ಸ್ಮಾರ್ಟ್ ನಗರಗಳಾಗಿದ್ದು, ವಸತಿ, ಅಗತ್ಯ ಮೂಲಸೌಕರ್ಯಗಳು, ಶೈಕ್ಷಣಿಕ ಸೌಲಭ್ಯ, ಆರೋಗ್ಯ ಸೇವೆಗಳು, ವಾಣಿಜ್ಯ ಚಟುವಟಿಕೆಗಳು ಹಾಗೂ ಸಮೀಪದಲ್ಲಿಯೇ ಕೈಗಾರಿಕೆಗಳೂ ಸ್ಥಾಪಿಸುವಂತಿರಬೇಕು. ಅತ್ಯುತ್ತಮ ಸಾರಿಗೆ ಸಂಪರ್ಕ ಹೊಂದಿರಬೇಕು ಎಂದು ತಿಳಿಸಿದರು.
ಈ ಟೌನ್ ಶಿಪ್ ನಿರ್ಮಾಣಕ್ಕೆ ಭೂಮಿಯ ಲಭ್ಯತೆಯ ಆಧಾರದಲ್ಲಿ ವಿವಿಧ ಜಿಲ್ಲೆಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವ ಈ ಯೋಜನೆಗೆ ಕಾನ್ಸ್ ಸೆಪ್ಟ್ ಪೇಪರ್ ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಐ.ಎಸ್.ಎನ್. ಪ್ರಸಾದ್, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂಟೆಗ್ರೇಟೆಡ್ ಟೌನ್ ಶಿಪ್ ಯೋಜನೆ: ಪರಿಣತ ವಿಶ್ವವಿದ್ಯಾಲಯಗಳ ಸಹಯೋಗ ಪಡೆಯಲು ಮುಖ್ಯಮಂತ್ರಿ ಸೂಚನೆ
Prasthutha|