ನಾರಾಯಣ ಗುರುಗೆ ಅವಮಾನ ಗುಲಾಮರಿಗೆ ಶರಣಾದ ತಳ ಸಮುದಾಯ

Prasthutha|

ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರದ ಗಣರಾಜ್ಯೋತ್ಸವದ ಸಮಿತಿ ತಿರಸ್ಕಾರ ಮಾಡಿರುವ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ನಾರಾಯಣ ಗುರುಗಳ ಬದಲಾಗಿ ಶಂಕರಾಚಾರ್ಯರ ಪ್ರತಿಮೆಯನ್ನು ಸ್ತಬ್ಧ ಚಿತ್ರದಲ್ಲಿ ಅಳವಡಿಸಲು ಕೇಂದ್ರ ರಕ್ಷಣಾ ಇಲಾಖೆ ಕೇರಳ ರಾಜ್ಯಕ್ಕೆ ಸೂಚನೆ ನೀಡಿರುವ ವಿಚಾರ ಮಾಧ್ಯಮಗಳಲ್ಲಿ ವರದಿ ಆಗುವುದರೊಂದಿಗೆ ವಿವಾದದ ಕಿಡಿ ಹತ್ತಿಕೊಂಡಿತು.

- Advertisement -

ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಜಟಾಯು ಪಾರ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಪ್ರಸ್ತಾಪವನ್ನು ಕಳಿಸಿತ್ತು. ಕೇಂದ್ರ ಸರಕಾರದ ಮಾರ್ಗದರ್ಶಿ ಸೂತ್ರ ಅನ್ವಯವೇ ಪ್ರವಾಸೋದ್ಯಮ ಕೇಂದ್ರಿತವಾಗಿ ಸ್ತಬ್ಧ ಚಿತ್ರ ರೂಪಿತವಾಗಿತ್ತು. ಸ್ತಬ್ಧ ಚಿತ್ರದಲ್ಲಿ ಇಂತಹ ಸಾಂಸ್ಕೃತಿಕ ರೂಪಕಗಳೊಂದಿಗೆ ಸ್ತಬ್ಧಚಿತ್ರದ ಮುಂಭಾಗ ಕೇರಳದ ಹೆಮ್ಮೆಯ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಪ್ರತಿಮೆಯನ್ನು ಇರಿಸಲಾಗಿತ್ತು. ಗಣರಾಜ್ಯೋತ್ಸವ ಪರೇಡ್ ಉಸ್ತುವಾರಿ ಹೊಂದಿರುವ ರಕ್ಷಣಾ ಇಲಾಖೆಯ ನಾಲ್ಕು ಹಂತದ ಪರಿಶೀಲನೆಗಳಲ್ಲಿ ಕೇರಳದ ಈ ಸ್ತಬ್ಧಚಿತ್ರ ತೇರ್ಗಡೆ ಆಗಿತ್ತು. ಅನಂತರ ನಾರಾಯಣ ಗುರುಗಳ ಪ್ರತಿಮೆಯನ್ನು ತೆಗೆದು ಆದಿ ಶಂಕರಾಚಾರ್ಯರ ಪ್ರತಿಮೆ ಇರಿಸಬೇಕೆಂದು ಕೇಂದ್ರ ಸರಕಾರ ಸೂಚಿಸಿತ್ತು. ಶಂಕರಾಚಾರ್ಯರು ಕೂಡ ಕೇರಳದ ಮತ್ತೊಬ್ಬ ಆಧ್ಯಾತ್ಮಿಕ ಗುರುವೇ ಆಗಿದ್ದರೂ ನಾರಾಯಣ ಗುರು ಅವರ ತತ್ವ ಸಿದ್ಧಾಂತಗಳು ಹೆಚ್ಚು ಜನಪ್ರಿಯ. ಇಂದಿಗೂ ಹೆಚ್ಚು ಪ್ರಸ್ತುತವಾಗಿರುವುದರಿಂದ ನಾರಾಯಣ ಗುರು ಅವರ ಪ್ರತಿಮೆಯನ್ನು ಬದಲಾಯಿಸಲು ಕೇರಳ ಸರಕಾರ ನಿರಾಕರಿಸಿತ್ತು

ಈ ಮೂಲಕ ಸತತ ಮೂರನೇ ಬಾರಿಗೆ ಕೇರಳ ರಾಜ್ಯಕ್ಕೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವ ಅವಕಾಶ ನಿರಾಕರಿಸಲಾಗಿದೆ. ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸುವ ಮೂಲಕ ಅವರಿಗೆ ಮತ್ತು ಅವರನ್ನು ಗುರು ಎಂದು ನಂಬಿ ಅವರ ತತ್ವ ಸಿದ್ಧಾಂತವನ್ನು ಅನುಸರಿಸಿಕೊಂಡು ಬರುತ್ತಿರುವ ಬಹುದೊಡ್ಡ ಪಂಗಡದವರಿಗೆ ಅವಮಾನ ಮಾಡಲಾಗಿದೆ ಎಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.

- Advertisement -

ಕರ್ನಾಟಕ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರಕಾರದ ನಿರ್ಧಾರವನ್ನು ಟೀಕೆ ಮಾಡಿ ನಾರಾಯಣ ಗುರು ಅವರಿಗೆ ಅಗೌರವ ತೊರಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.  ಅನಂತರ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ನೇರವಾಗಿ ಪ್ರಧಾನಿಯನ್ನೇ ಪ್ರಶ್ನೆ ಮಾಡಿದ್ದರು. ಅವಕಾಶ ನಿರಾಕರಿಸಿರುವ ಕೇಂದ್ರದ ನಡೆ ವಿರುದ್ಧ ಕಾಂಗ್ರೆಸ್, ಜೆಡಿಎಸ್, ಪ್ರಗತಿಪರರು ವಾಗ್ದಾಳಿ ನಡೆಸಿದ್ದಾರೆ.

 ಸಾಮಾಜಿಕ ಜಾಲತಾಣಗಳಲ್ಲೂ ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಕಮಲದ ಮುಖಂಡರು ಇದನ್ನು ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ಮಾಡುವ ಮೂಲಕ ಬೆತ್ತಲಾಗುತ್ತಿದ್ದಾರೆ. ಅದರಲ್ಲೂ ಕರಾವಳಿಯ ಸಚಿವರು ತಮ್ಮ ಪಕ್ಷದ ಮೇಲ್ಜಾತಿಯವರು ಬರೆದು ಕೊಟ್ಟ ಹೇಳಿಕೆಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರಮುಖವಾಗಿ ಬಿಲ್ಲವ ಸಮುದಾಯದ ಮತ್ತು ಇತರ ಹಿಂದುಳಿದ ಜಾತಿಗಳ ಕೆಂಗಣ್ಣಿಗೆ ಗುರಿ ಆಗುತ್ತಿದ್ದಾರೆ.

ಶಾಸಕರಾಗಲು, ಸಚಿವರಾಗಲು ಜಾತಿ ಕಾರ್ಡ್ ಬಳಸುವ ಇದೇ ಕರಾವಳಿಯ ಬಿಜೆಪಿ ಬಿಲ್ಲವ ಮುಖಂಡರು ಬಾಲಿಶ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ನೈಜ ಬಣ್ಣವನ್ನು ಬಯಲು ಮಾಡುತ್ತಿದ್ದಾರೆ. ಓಟಿಗಾಗಿ ಮಾತ್ರ ಹಿಂದುಳಿದ ವರ್ಗಗಳ ಹಿಂದೆ ಬಿದ್ದಿರುವ ಈ ಮಂದಿ ವಾಸ್ತವದಲ್ಲಿ ಹಿಂದುಳಿದವರ ಹಿತಾಸಕ್ತಿಗಳ ಪರವಾಗಿ ಇಲ್ಲ ಎಂಬುದು ಈ ವಿಚಾರದಲ್ಲಿ ತೋರಿಸಿಕೊಟ್ಟಿದ್ದಾರೆ.

ಹಿಂದೂ ಧರ್ಮ ರಕ್ಷಕ

 ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬುವುದು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವಾಗಿತ್ತು. ನಾರಾಯಣ ಗುರುಗಳು ಅಂದಿನ ಕೇರಳದ ಹಿಂದೂ ಸಮಾಜದಲ್ಲಿದ್ದ ಅತ್ಯಂತ ಕೊಳಕು ಮಟ್ಟದ  ಅಸ್ಪಶ್ಯತೆಯ ಪಿಡುಗಿನ ವಿರುದ್ಧ ಹೋರಾಟ ನಡೆಸಿದವರು. ಹಿಂದುಳಿದ ವರ್ಗದ ಹಿಂದೂಗಳಿಗೆ ದೇವಸ್ಥಾನ ಪ್ರವೇಶ ಮಾತ್ರವಲ್ಲ, ದೇವಸ್ಥಾನ ಪರಿಸರದ ರಸ್ತೆಗಳಲ್ಲೂ ಓಡಾಡುವಂತಿರಲಿಲ್ಲ. ಕೇರಳದಲ್ಲಿ ಜಾತಿ ತಾರತಮ್ಯ, ಮಹಿಳೆಯರ ಶೋಷಣೆ ಹೆಚ್ಚಾಗಿದ್ದ ಕಾಲದಲ್ಲಿ ಈಳವ ಸಮುದಾಯದಲ್ಲಿ ಹುಟ್ಟಿದ ನಾರಾಯಣ ಗುರುಗಳು ಸಮಾಜ ಸುಧಾರಕರಾಗಿ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟವರು. ಸಂಘಟನೆಗಳನ್ನು ಕಟ್ಟಿ ಹೋರಾಟ ನಡೆಸಿದರು. ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ, ರವೀಂದ್ರ ಠಾಗೋರ್ ಮುಂತಾದ ಮಹನೀಯರು ಕೇರಳಕ್ಕೆ ಭೇಟಿ ನೀಡಿ ಗುರುಗಳನ್ನು ಸಂದರ್ಶಿಸಿ ಹಿಂದೂ ಧರ್ಮದ ಕೊಳಕು ವ್ಯವಸ್ಥೆಯ ನಿವಾರಣೆ ಬಗ್ಗೆ ಚರ್ಚೆ ನಡೆಸಿ ಗುರುಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ್ದರು.

ಕರಾವಳಿಯ ಬಿಲ್ಲವ, ಕರ್ನಾಟಕದ ಈಡಿಗ ಜಾತಿಗೆ ಸಮನಾದ ಹಿಂದುಳಿದ ಈಳವ ಸೇರಿದಂತೆ ಹಲವಾರು ಪಂಗಡಗಳ ಜನರಿಗೆ ಹಿಂದೂ ದೇವಸ್ಥಾನಗಳಿಗೆ ಪ್ರವೇಶ, ಆರಾಧನೆ ಮಾಡುವ ಅವಕಾಶವನ್ನು ಸನಾತನ ಹಿಂದೂ ಧರ್ಮದ ಮೇಲ್ಜಾತಿಯವರು ಎನ್ನಲಾದ ಮಂದಿ ನಿರಾಕರಿಸಿದ್ದಾಗ ಇಂತಹ ತಳ ಸಮುದಾಯದ ಜನರಿಗಾಗಿ ನಾರಾಯಣ ಗುರು ಪ್ರತ್ಯೇಕ ದೇವಸ್ಥಾನಗಳನ್ನೆ ಸ್ಥಾಪಿಸಿ ಆರಾಧನೆಯ ಅವಕಾಶ ಮಾಡಿಕೊಟ್ಟವರು. ಅಂದಿನ ಕಾಲದಲ್ಲಿ ಕರ್ನಾಟಕ ಕರಾವಳಿಯ ಬಿಲ್ಲವ ಜಾತಿಯವರಿಗೂ ದೇವಸ್ಥಾನಗಳಿಗೆ ಪ್ರವೇಶ ಇರಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ  ಬ್ರಾಹ್ಮಣ ಪುರೋಹಿತರಿಂದ ಅವಮಾನಕ್ಕೀಡಾದ ಮಂಗಳೂರಿನ ಶ್ರೀಮಂತ ಬಿಲ್ಲವರು ಮಂಗಳೂರು ಬಂದರಿನ ಮುಸ್ಲಿಂ ವ್ಯಾಪಾರಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಕೇರಳಕ್ಕೆ ತೆರಳಿ ನಾರಾಯಣ ಗುರುಗಳನ್ನು ಮಂಗಳೂರಿಗೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ಕುದ್ರೋಳಿಯಲ್ಲಿ ಗೋಕರ್ಣನಾಥ ಶಿವಾಲಯವನ್ನು ನಾರಾಯಣ ಗುರುಗಳು ಸ್ಥಾಪಿಸಿದರು. ಇಂದು ಕೂಡ ಬಿಲ್ಲವ ಸಮುದಾಯದ ಹೆಮ್ಮೆಯ ಐಡೆಂಟಿಟಿಯಾಗಿ ಈ ದೇವಸ್ಥಾನವಿದೆ.

ಶ್ರೀಲಂಕಾ, ದಕ್ಷಿಣ ಭಾರತದಾದ್ಯಂತ ನಾರಾಯಣ ಗುರುಗಳ ಅನುಯಾಯಿಗಳಿದ್ದಾರೆ. ನಾರಾಯಣ ಗುರುಗಳ ಸಂದೇಶ ವಿಶ್ವ ಮನ್ನಣೆ ಪಡೆದಿದೆ. ನಾರಾಯಣ ಗುರುಗಳು ತೋರಿಸಿದ ತತ್ವ ಸಿದ್ಧಾಂತಗಳಿಂದಾಗಿಯೇ ಅನೇಕ ಮಂದಿ ರಾಜಕೀಯ ಅಧಿಕಾರ ಪಡೆಯಲು, ಸಮಾಜದಲ್ಲಿ ಮುನ್ನಡೆ ಪಡೆಯಲು ಸಾಧ್ಯವಾಗಿದೆ. ಮೇಲ್ವರ್ಗದ ಜೀತ, ಗುಲಾಮಗಿರಿ ಮಾಡುತ್ತಿದ್ದ ಹಿಂದುಳಿದ ಸಮುದಾಯದ ಹಿಂದೂಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು ನಾರಾಯಣ ಗುರುಗಳ ಹೋರಾಟದ ಫಲವಾಗಿದೆ. ದೇಶದಲ್ಲಿ ತಮ್ಮದೇ ಆದ ಸಂವಿಧಾನ ಇಲ್ಲದೆ ಇದ್ದ ಸಂದರ್ಭದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಹೋರಾಟ ಮಾಡಿದವರು ನಾರಾಯಣ ಗುರು. ಬ್ರಿಟಿಷರ ಆಡಳಿತ ಕಾಲದಲ್ಲಿ ಹಿಂದೂ ಧರ್ಮದ ಶೋಷಿತ ಸಮುದಾಯ ದೊಡ್ಡ ಪ್ರಮಾಣದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುತ್ತಿತ್ತು. ನಾರಾಯಣ ಗುರುಗಳು ಹೋರಾಟ ಕೈಗೊಳ್ಳದೇ ಹೋಗಿದ್ದರೆ ದಕ್ಷಿಣ ಭಾರತದ ಬಹುತೇಕ ಹಿಂದುಳಿದ ವರ್ಗಗಳು ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುತ್ತಿದ್ದರು. ಇದನ್ನು ತಡೆಯುವ ಮೂಲಕ ನಾರಾಯಣ ಗುರುಗಳು ನೈಜ ಹಿಂದೂ ಧರ್ಮ ರಕ್ಷಕರಾಗಿದ್ದಾರೆ ಎಂಬ ಅಭಿಪ್ರಾಯವು ಇದೆ.

 ಗಣರಾಜ್ಯೋತ್ಸವ ಪರೇಡ್ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಳಸಮುದಾಯದ ಮಹಾಪುರುಷರ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಇರುವ ಪೂರ್ವಗ್ರಹ ಮತ್ತು ತಿರಸ್ಕಾರಕ್ಕೆ ಸಾಕ್ಷಿ. ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಯಾವ ಕಾರಣಕ್ಕಾಗಿ ಅವಕಾಶ ನಿರಾಕರಿಸಲಾಗಿದೆ? ನಾರಾಯಣ ಗುರುಗಳು ಹಿಂದೂ ಧರ್ಮಕ್ಕೆ ಸೇರಿದವರಲ್ಲವೇ? ಅಂತಹ ಅಭಿಪ್ರಾಯವನ್ನು ಬಿಜೆಪಿ ಪಕ್ಷ ಹೊಂದಿದ್ದರೆ ಹಾಗೆಂದು ಮುಕ್ತವಾಗಿ ಹೇಳುವ ಧೈರ್ಯ ತೋರಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ಖಂಡನೀಯ ಹಾಗೂ ನಮ್ಮ ನೆಲದ ನಂಬಿಕೆಗಳಿಗೆ ಮಾಡಿರುವ ಅಪಮಾನ. ಅಂಥವರ ಚಿತ್ರವಿದ್ದ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿರುವುದು ಕ್ಷಮಾರ್ಹವಲ್ಲದ ತಪ್ಪು ಹಾಗೂ ಭಾರತೀಯ ಸುಧಾರಣಾ ಪರಂಪರೆಯ ಬಗ್ಗೆ ತಿಳಿವಳಿಕೆ ಇಲ್ಲದ ಅಜ್ಞಾನದ ಪರಮಾವಧಿ. ಆಯ್ಕೆ ಸಮಿತಿಯಲ್ಲಿ ಇಂಥ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲ ಎಂಬ ಎಚ್.ಡಿ. ಕುಮಾರಸ್ವಾಮಿಯವರ ಅಭಿಪ್ರಾಯ ಸರಿಯಾಗಿದೆ.

ಈಗಿರುವ ಆಡಳಿತ ಪಕ್ಷ ಹಿಂದಿನ ಕಾಲದಲ್ಲಿ ಜಾತಿ ತಾರತಮ್ಯ ಪಾಲಿಸುತ್ತಿದ್ದ ನೀತಿಯನ್ನೇ ಬೆಂಬಲಿಸುವ ಮನೋಭಾವನೆ ಹೊಂದಿರುವುದರಿಂದ ಸಹಜವಾಗಿ ಅವರಿಗೆ ನಾರಾಯಣ ಗುರುಗಳ ಸಂದೇಶ ಪಥ್ಯ ಆಗುವುದಿಲ್ಲ. ಅಂದು ನಾರಾಯಣ ಗುರುಗಳು ಯಾರ ಪರವಾಗಿ ನ್ಯಾಯಕ್ಕಾಗಿ ಹೋರಾಟ ಮಾಡಿದರೋ ಆ ಸಮುದಾಯಕ್ಕೆ ನಾರಾಯಣ ಗುರುಗಳ ಹೋರಾಟದ ಮಹತ್ವ ತಿಳಿದಿಲ್ಲ ಎಂಬುದು ಅತ್ಯಂತ ವಿಷಾದನೀಯ ಮತ್ತು ದುರಂತಕಾರಿ ವಿಚಾರ. ಈ ತಳ ಹಂತದ ಸಮುದಾಯ ಮತ್ತೆ ಅದೇ ಶೋಷಿಸುವವರ ಗುಲಾಮಗಿರಿಗೆ ಶರಣಾಗಿದ್ದಾರೆ ಎಂಬುದು ಖೇದಕರ ವಾಸ್ತವ.



Join Whatsapp