ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಅಳವಡಿಕೆ ಬಿಜೆಪಿಯ ಕೋಮು ಧ್ರುವೀಕರಣದ ಮುಂದುವರಿದ ಭಾಗ: ಅಬ್ದುಲ್ ಮಜೀದ್ ಮೈಸೂರು ಆರೋಪ

Prasthutha|

ಬೆಂಗಳೂರು: ವಿರೋಧ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಏಕಾಏಕಿ ಸಾವರ್ಕರ್ ಚಿತ್ರವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ, ಅದೂ ಸಭಾಧ್ಯಕ್ಷರ ಪೀಠದ ಪಕ್ಕದಲ್ಲಿ ಅಳವಡಿಸಲಾಗಿದೆ. ಇದು ಕೋಮುವಾದಿ ಬಿಜೆಪಿ ಸರ್ಕಾರದ ಕೋಮು ಧ್ರುವೀಕರಣದ ಮುಂದುವರಿದ ಭಾಗವಾಗಿದ್ದು, ಮಿತಿಮೀರಿರುವ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ಕುಸಿತದಂತಹ ಗಂಭೀರ ಆರೋಪಗಳು ಚರ್ಚೆಗೆ ಬಾರದಂತೆ ಸದನದ ಗಮನವನ್ನು ಬೇರೆ ಕಡೆಗೆ ಸೆಳೆಯಲು ಬಿಜೆಪಿ ಹೂಡಿರುವ ತಂತ್ರವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಕಿಡಿಕಾರಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಸ್ವಾತಂತ್ರ ಹೋರಾಟಗಾರರೆಲ್ಲರೂ ಧೈರ್ಯವಂತರಲ್ಲ ಎಂದು ಹೇಳಲು ಬ್ರಿಟಿಷರಿಗೆ ಸಿಕ್ಕ ಒಂದು ಹೆಸರು ಸಾವರ್ಕರ್. ಆತ ಬ್ರಿಟಿಷರಿಗೆ ಬರೆದ ಕ್ಷಮಾಪಣಾ ಪತ್ರಗಳನ್ನೇ ಅದಕ್ಕೆ ಸಾಕ್ಷಿಯಾಗಿ ಬ್ರಿಟಿಷರು ಅವುಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಸ್ವಾತಂತ್ರ ಹೋರಾಟದಲ್ಲಿ ಹೋರಾಡಿ ಹುತಾತ್ಮರಾದ ವೀರರಿಗೆ ಅಪಮಾನವಾದ ಈ ಸಾವರ್ಕರ್. ಅಂತಹ ಹೇಡಿಗೆ ಕರ್ನಾಟಕದ ಸುವರ್ಣಸೌಧದಲ್ಲಿ ಸ್ಥಾನ ನೀಡಿರುವುದನ್ನು ಎಸ್ಡಿಪಿಐ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಇದರ ಹಿಂದೆ ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಮತ ಸೆಳೆಯುವ ಷಡ್ಯಂತ್ರವಲ್ಲದೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

- Advertisement -

ಬೊಮ್ಮಾಯಿ ಅವರದ್ದು ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ. ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇವರದೇ ಗೂಂಡಾ ಪಡೆಗಳಿಂದ ಪಾತಾಳಕ್ಕೆ ಕುಸಿದಿದೆ. ಈ ಬಗ್ಗೆ ಸದನದಲ್ಲಿ ಚರ್ಚೆ ಆಗಬಾರದು ಎಂಬ ದುರುದ್ದೇಶದಿಂದ ಸಾವರ್ಕರ್ ಫೋಟೊದ ವಿವಾದವನ್ನು ಬಿಜೆಪಿ ಸೃಷ್ಟಿ ಮಾಡಿದೆ. ಅವರ ಈ ತಂತ್ರಕ್ಕೆ ವಿರೋಧಪಕ್ಷಗಳು ಬಲಿಯಾಗಬಾರದು ಎಂದ ಮಜೀದ್ ಅವರು, ಫೋಟೊ ಅಳವಡಿಕೆ ವಿರೋಧಿಸುವುದರ ಜೊತೆಗೆ ರಾಜ್ಯದ ಗಂಭೀರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಸರ್ಕಾರವನ್ನು ಪ್ರಶ್ನೆ ಮಾಡುವ ತಮ್ಮ ಕರ್ತವ್ಯವನ್ನು ವಿರೋಧ ಪಕ್ಷಗಳು ನಿರ್ವಹಿಸಬೇಕು ಎಂದು  ಒತ್ತಾಯಿಸಿದ್ದಾರೆ.



Join Whatsapp