ಬೆಂಗಳೂರು: ಸಚಿವ MTB ನಾಗರಾಜ್ ಅವರು ಕೆ.ಆರ್ ಪುರ ಠಾಣೆಯ ಇನ್ಸ್ ಪೆಕ್ಟರ್ ನಂದೀಶ್ ಅವರ ಸಾವಿನ ಕುರಿತು, ‘ ಪೋಸ್ಟಿಂಗ್ ಗಾಗಿ 70-80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ ‘ ಎಂದು ಬಹಿರಂಗವಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಕಳೆದ ಎರಡು ವರ್ಷಗಳಿಂದ ವಿರೋಧ ಪಕ್ಷಗಳು, ಮಾಧ್ಯಮಗಳು ಆರೋಪ ಮಾಡುತ್ತಲೇ ಇವೆ. ಆದರೆ ಈಗ ಸಚಿವ ಎಂಟಿಬಿ ನಾಗರಾಜ್ ಅವರ ಈ ಹೇಳಿಕೆ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಸಾಬೀತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಅವರದೇ ಪಕ್ಷದವರ ಆರೋಪ, ಮಾತುಗಳು ಹೊಸತೇನಲ್ಲ. ಈ ಹಿಂದೆ ಬಿಜೆಪಿ ಶಾಸಕರು ಹಾಗೂ ಪರಿಷತ್ ಸದಸ್ಯರು ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದರು. ಈಗ ಈ ಸರದಿ ಸರ್ಕಾರದ ಸಚಿವರದ್ದಾಗಿದೆ. ನಾಗರಾಜ್ ಅವರು ತಮ್ಮ ಮನದಲ್ಲಿನ ಸತ್ಯವನ್ನು ಹೇಳಿದ್ದಾರೆ ಎಂದರು.
ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಮತ್ತೊಮ್ಮೆ ರುಜುವಾತಾಗಿದೆ. ಮುಖ್ಯಮಂತ್ರಿಗಳು ಅವರ ಕಾರ್ಯಕ್ರಮದಲ್ಲಿ ಧಮ್ಮು, ತಾಕತ್ತಿನ ಸವಾಲು ಹಾಕಿದ್ದರು. ಈಗ ಅವರಿಗೆ ಧಮ್ಮು, ತಾಕತ್ತು ಇದ್ದರೆ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಇನ್ಸ್ ಪೆಕ್ಟರ್ ಗೆ 70-80 ಲಕ್ಷ ಆದರೆ, ಡಿಸಿಪಿ ಐಪಿಎಸ್ ಅಧಿಕಾರಿಗಳಿಗೆ ಎಷ್ಟು ರೇಟ್ ನಿಗದಿ ಮಾಡಿದ್ದಾರೆ ಎಂದು ತಿಳಿಸಬೇಕು. ಸಚಿವರ ಮಾತು ನಿಜವಾಗಿದ್ದರೆ ಮುಖ್ಯಮಂತ್ರಿಗಳು ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇದು ಸುಳ್ಳಾಗಿದ್ದರೆ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಅವರು ಆಗ್ರಹಿಸಿದರು.
ನಿಮ್ಮ ಸಚಿವರೇ ಹೇಳಿದಂತೆ ಪೋಸ್ಟಿಂಗ್ ಗಾಗಿ ನೀಡಲಾಗಿರುವ 70-80 ಲಕ್ಷ ಹಣ ಯಾರಿಗೆ ಸೇರಿದೆ. ಮುಖ್ಯಮಂತ್ರಿಗಳಿಗೆ ಸೇರಿದೆಯಾ? ಅಥವಾ ಗೃಹಮಂತ್ರಿಗಳಿಗೆ ಸೇರಿದೆಯಾ? ಅಥವಾ ಬೇರೆಯವರಿಗೆ ಸೇರಿದೆಯಾ? ಎಂಬ ಸ್ಪಷ್ಟನೆ ನೀಡಬೇಕು. ಈ ಹಿಂದೆ ನಿಮ್ಮ ವಿಧಾನ ಪರಿಷತ್ ಬಿಜೆಪಿ ಸದಸ್ಯ ವಿಶ್ವನಾಥ್ ಅವರು ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಬಿಜೆಪಿ ಶಾಸಕ ಯತ್ನಾಳ್ ಅವರು ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ಹೇಳಿದ್ದರು. ಮಾಧುಸ್ವಾಮಿ ಅವರು ಈ ಸರ್ಕಾರವನ್ನು ಸುಮ್ಮನೆ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಆರೋಪಗಳನ್ನು ವಿರೋಧ ಪಕ್ಷದವರು ಮಾಡುತ್ತಿರುವುದಕ್ಕಿಂತ ಅವರದೇ ಪಕ್ಷದ ನಾಯಕರು ಹೆಚ್ಚಾಗಿ ಹೇಳುತ್ತಿದ್ದಾರೆ. ಈ ಹಿಂದೆ ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪಿ ಎಸ್ ಐ ನೇಮಕ ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದಾಗ ಅವರಿಗೆ ನೊಟೀಸ್ ಕೊಟ್ಟಿದ್ದೀರಿ. ಈಗ ನಿಮ್ಮ ಸಚಿವರು ಈ ಮಾತು ಹೇಳಿದ್ದು, ಇವರಿಗೆ ನೊಟೀಸ್ ಯಾವಾಗ ನೀಡುತ್ತೀರಿ? ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಪೇ ಸಿಎಂ ಅಭಿಯಾನ ಮಾಡಿದಾಗ ಸಿಐಡಿ ಮೂಲಕ ಕೇಸು ದಾಖಲಿಸುತ್ತೀರಿ? ನಿಮ್ಮ ಸಚಿವರ ಹೇಳಿಕೆಯೂ ಪೇ ಸಿಎಂ ಆರೋಪದ ಭಾಗವಲ್ಲವೆ? ಇತ್ತೀಚೆಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಅವರ ಕಾರ್ಯದರ್ಶಿ ಮಂಜುನಾಥ್ ಅವರು ಒಂದು ಸುತ್ತೋಲೆ ಹೊರಡಿಸಿ, ಸರ್ಕಾರಿ ಕಚೇರಿಗಳಲ್ಲಿ ನಾನು ಭ್ರಷ್ಟ ಅಧಿಕಾರಿಯಲ್ಲ, ಲಂಚ ಸ್ವೀಕರಿಸುವುದಿಲ್ಲ ಎಂಬ ಅಭಿಯಾನ ಮಾಡಿದ್ದರು. ಇಷ್ಟೆಲ್ಲಾ ಅಭಿಯಾನ ಮಾಡಿದರೂ ಇಷ್ಟೊಂದು ಭ್ರಷ್ಟಾಚಾರ ಮಾಡಿರುವ ಅಧಿಕಾರಿ ಹಾಗೂ ರಾಜಕಾರಣಿ ಯಾರು? ಎಂಬುದನ್ನು ಜನರಿಗೆ ಹೇಳಬೇಕಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಇನ್ಸ್ ಪೆಕ್ಟರ್ ನಂದೀಶ್ ಅವರು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ, ಒತ್ತಡ ತಡೆಯಲಾಗದೇ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತೇನೆ. ಬಿಜೆಪಿಯವರ ಆಡಳಿತದಲ್ಲಿ ಪೊಲೀಸ್ ಹುದ್ದೆಯನ್ನು ಹರಾಜು ಕೂಗುವ ರೀತಿ ಮಾಡಿದ್ದಾರೆ. ಯಾರು ಹೆಚ್ಚು ಹಣ ನೀಡುತ್ತಾರೋ ಅವರು ಹೇಳಿದ ಕಡೆ ಪೋಸ್ಟಿಂಗ್ ನೀಡುತ್ತಾರೆ. ನಂತರ ಅವರು ಇದನ್ನು ಹಿಂಪಡೆಯಲು ದಿನನಿತ್ಯ ವಸೂಲಿಗೆ ಮುಂದಾಗುತ್ತಾರೆ. ಆ ಮೂಲಕ ಪೊಲೀಸ್ ಠಾಣೆ ಟೋಲ್ ಗೇಟ್ ನಂತಾಗಿದೆ. ಈ ಸುಲಿಗೆ ಮಾಡುವ ಒಥ್ತಡ ಅಧಿಕಾರಿಗಳಿಗೆ, ಸುಲಿಗೆ ಆಗದಿದ್ದರೆ ಇವರು ಹಾಕಿದ ಬಂಡವಾಳ ಹಿಂಪಡೆಯುವುದಿಲ್ಲ. ಇಂತಹ ಕೆಲಸಕ್ಕೆ ಕೈ ಹಾಕಿ ನಂದೀಶ್ ಅವರು ಅಮಾನತುಗೊಂಡು ಒತ್ತಡ ತಡೆಯಲಾರದೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಿಜೆಪಿಯವರ ಭ್ರಷ್ಟಾಚಾರ ನಂದೀಶ್ ಅವರನ್ನು ಬಲಿ ತೆಗೆದುಕೊಂಡಿದೆ. ಇದು ನಿಧನವಲ್ಲ ಭ್ರಷ್ಟಾಚಾರದಿಂದ ಆಗಿರುವ ಹತ್ಯೆ. ಇದರ ಜವಾಬ್ದಾರಿಯನ್ನು ಬಿಜೆಪಿ ಸರ್ಕಾರವೇ ಹೊರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಶರತ್ ಬಚ್ಚೇಗೌಡ ಅವರು ಉಪಸ್ಥಿತರಿದ್ದರು.