‘ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ’: ದ.ಕ ಕೈ ನಾಯಕರ ಆರೋಪ

Prasthutha|

- Advertisement -

ಮಂಗಳೂರು: ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಮೇಕೆದಾಟು ಯೋಜನೆಗೆ ಅನುಮತಿ ಇಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ. ಒಟ್ಟಿನಲ್ಲಿ ರಾಜ್ಯಕ್ಕೆ ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕರ್ನಾಟಕ್ಕೆ ಚೊಂಬು ನೀಡಿದೆ ಎಂದು ಎಂಎಲ್ ಸಿ ಮಂಜುನಾಥ ಭಂಡಾರಿ ಆರೋಪಿಸಿದ್ದಾರೆ.

ಬಜೆಟ್‌ನಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಇಲ್ಲ. ದೇಶದ ಮಹಿಳೆಯರು, ರೈತರು ಹಾಗೂ ಯುವಜನತೆಯ ಭವಿಷ್ಯದ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರುವ ಯಾವುದೇ ಗುಣಾತ್ಮಕ ಸಂಗತಿಗಳನ್ನು ಈ ಬಜೆಟ್‌ ಹೊಂದಿಲ್ಲ ಎಂದು ಹೇಳಿದ್ದಾರೆ.

- Advertisement -

ಬಜೆಟ್ ಬಿಜೆಪಿಯೇತರ ರಾಜ್ಯಗಳನ್ನು ಕಡೆಗಣಿಸಿದೆ : ಬಿ ರಮಾನಾಥ ರೈ

ಮಂಗಳೂರು: ಇದು ದೇಶದ ಬಜೆಟ್ ಎಂದು ಅನಿಸುತ್ತಿಲ್ಲ. ಮೋದಿ‌ ಸರಕಾರ ತನ್ನ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಬಿಹಾರ, ಆಂಧ್ರಪ್ರದೇಶಕ್ಕೆ‌ ಬಜೆಟ್‌ನಲ್ಲಿ‌ ಸಿಂಹಪಾಲು ಕೊಟ್ಟಿದ್ದು ಬಿಜೆಪಿಯೇತರ ರಾಜ್ಯಗಳನ್ನು ಕಡೆಗಣಿಸಿದೆ. ಎನ್‌ಡಿಎ ಸರಕಾರಕ್ಕೆ 17+2 ಸಂಸದರನ್ನು ನೀಡಿರುವ ಕರ್ನಾಟಕಕ್ಕೆ ಮತ್ತೊಮ್ಮೆ ಮೋದಿ ಸರಕಾರ ಖಾಲಿ ಚೊಂಬು ಕೊಟ್ಟು‌ಅನ್ಯಾಯ ಮಾಡಿದೆ. ಕರ್ನಾಟಕಕ್ಕೆ ಈ ಬಜೆಟ್‌ನಲ್ಲಿ‌ ಸಿಕ್ಕಿರುವುದು ಶೂನ್ಯ. ಈ ರೀತಿ ಕರ್ನಾಟಕವನ್ನು ಯಾರೂ ಕಡೆಗಣಿಸಿರಲಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ‌.

ನೆನೆಗುದಿಗೆ ಬಿದ್ದಿರುವ ರಾಜ್ಯದ ಹಲವು ನೀರಾವರಿ ಯೋಜನೆ ಮತ್ತು ರೈಲ್ವೇ ಯೋಜನೆಗಳ ಪೈಕಿ ಯಾವುದೇ ಯೋಜನೆಗಳಿಗೂ ನಯಾಪೈಸೆ ಅನುದಾನ ಕೊಟ್ಟಿಲ್ಲ. ರಾಜ್ಯಕ್ಕೆ ಒಂದೇ ಒಂದು ಹೊಸ ಯೋಜನೆ ಘೋಷಿಸಿಲ್ಲ,. ಬಿಜೆಪಿಯನ್ನು ಸತತ ಮೂರು ದಶಕಗಳಿಂದ ಗೆಲ್ಲಿಸುತ್ತಿರುವ ಕರಾವಳಿಗೂ ಈ ಬಜೆಟ್‌ನಲ್ಲಿ ದ್ರೋಹ ಆಗಿದೆ.‌ ಮಂಗಳೂರನ್ನು ಪ್ರತ್ಯೇಕ ರೈಲ್ವೇ ವಿಭಾಗ ಮಾಡುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಮಂಗಳೂರಿನ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೆಗೆ ಸೇರಿಸಬೇಕೆಂಬ ಬೇಡಿಕೆಯನ್ನೂ ಈಡೇರಿಸಿಲ್ಲ.
ನಿಸ್ಸಂಶಯವಾಗಿ ಈ ಬಜೆಟ್ ಕರ್ನಾಟಕಕ್ಕೆ ಮಹಾ ದ್ರೋಹ ಎಸಗಿದ ಬಜೆಟ್ ಎಂದು ಇತಿಹಾಸದಲ್ಲಿ‌ ದಾಖಲಾಗಲಿದೆ ಎಂದರು.

ಪ್ರಜಾಪ್ರಭುತ್ವ ವಿರೋಧಿ ಬಜೆಟ್: ಹರೀಶ್ ಕುಮಾರ್

ಮಂಗಳೂರು: ಬಜೆಟ್ ನಲ್ಲಿ ತಾರತಮ್ಯ ಹೆಚ್ಚಾಗಿದ್ದು, ಪ್ರಜಾಪ್ರಭುತ್ವ ವಿರೋಧಿ ಬಜೆಟ್ ಆಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟ ಪಕ್ಷಗಳ ಆಡಳಿತ ರಾಜ್ಯಗಳಿಗೆ ಮಾತ್ರ ನೆರವು ನೀಡುವ ಬಜೆಟ್ ಆಗಿದ್ದು, ಇಂಡಿಯಾ ಒಕ್ಕೂಟದ ಪ್ರಭಾವವಿರುವ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿಲ್ಲ. ಈ ಹಿಂದಿನ ಯುಪಿಎ ನೇತೃತ್ವದ ಮನಮೋಹನ್ ಸಿಂಗ್ ಅವರ ಸರಕಾರ ಮಂಡಿಸಿರುವ ಎಲ್ಲ ಬಜೆಟ್ ಗಳು ರಾಜಕೀಯ ಉದ್ದೇಶಹೊಂದಿರದೆ ಆರ್ಥಿಕ ಅಭಿವೃದ್ಧಿ ಮತ್ತು ದೂರದೃಷ್ಟಿಯನ್ನು ಹೊಂದಿತ್ತು. ಎನ್ ಡಿಎ ರಾಜಕೀಯ ಸಲುವಾಗಿ ಬಜೆಟ್ ಮಂಡಿಸಿದೆ. ಒಟ್ಟಾರೆ ರಾಜಕೀಯ ಸರ್ಕಸ್ಸಿನ ಬಜೆಟ್ ಎಂದು ಹೇಳಿದ್ದಾರೆ.



Join Whatsapp