ಬೆಂಗಳೂರು । ಕುಖ್ಯಾತ ರೌಡಿ ಶರಣಪ್ಪ ಕಾಪುಗೆ ಗುಂಡೇಟು; ಸೆರೆ

Prasthutha|

ಬೆಂಗಳೂರು: ಕೊಲೆ, ಕೊಲೆಯತ್ನ, ಜೀವ ಬೆದರಿಕೆ,ಸುಲಿಗೆ ಸೇರಿ ಹತ್ತಕ್ಕೂ ಹೆಚ್ಚು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ‌ ಶರಣಪ್ಪಗೆ ಇಂದು ನಸುಕಿನಲ್ಲಿ ಸಂಜಯನಗರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

- Advertisement -

ಪೊಲೀಸರ ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡಿರುವ ಲೊಟ್ಟೆಗೊಲ್ಲಹಳ್ಳಿಯ ಶರಣಪ್ಪ ಅಲಿಯಾಸ್ ಕಾಪು(23) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.

ಕಳೆದ ಏ.9ರಂದು ಸಂಜಯನಗರದ ಮಂಜುನಾಥ ಲೇಔಟ್ ಬಳಿ ವಾಹನ ರಸ್ತೆಗೆ ಅಡ್ಡನಿಲ್ಲಿಸಿ ಪ್ರಶ್ನಿಸಲು ಬಂದ ವೇಣುಗೋಪಾಲ್ ಅವರ ಮೇಲೆ ಹಲ್ಲೆ ಮಾಡಿ ರೌಡಿ‌ ಶರಣಪ್ಪ ಪರಾರಿಯಾಗಿದ್ದ ಎಂದು ಹೇಳಲಾಗಿದೆ.

- Advertisement -

ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಾಗ ಕೃತ್ಯವೆಸಗಿದ ರೌಡಿ‌ ಶರಣಪ್ಪ ನಗರದಲ್ಲಿ ಕೊಲೆ, ಕೊಲೆಯತ್ನ, ಜೀವ ಬೆದರಿಕೆ,ಸುಲಿಗೆ ಸೇರಿ ಹತ್ತಕ್ಕೂ ಹೆಚ್ಚು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಅಪರಾಧ ಕೃತ್ಯಗಳಿಂದ ಪೊಲೀಸರಿಗೆ ಸವಾಲಾಗಿದ್ದ ರೌಡಿ‌ ಶರಣಪ್ಪ ಬಂಧನಕ್ಕೆ ವಿಶೇಷ ತಂಡ ರಚಿಸಿಕೊಂಡ ಸಂಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಬಾಲರಾಜ್ ಅವರು ಕಾರ್ಯಾಚರಣೆ ಕೈಗೊಂಡಾಗ ಮುಂಜಾನೆ 5ರ ವೇಳೆ ಭೂಪಸಂದ್ರ ಬಳಿ ಕಾಪು ಅಡಗಿಕೊಂಡಿರುವ ಖಚಿತ ಮಾಹಿತಿ ಲಭ್ಯವಾಗಿದೆ.

ತಕ್ಷಣವೇ ಆರೋಪಿಯನ್ನು ಬಂಧಿಸಲು‌ ಮುಂದಾದಾಗ ಹರಿತವಾದ ಆಯುಧದಿಂದ ಕಾನ್ ಸ್ಟೇಬಲ್ ಮಲ್ಲಪ್ಪನ ಮೇಲೆ ಹಲ್ಲೆಗೆ ಶರಣಪ್ಪ ಯತ್ನಿಸಿದ್ದಾನೆ.

ಶರಣಾಗುವಂತೆ ಸೂಚಿಸಿದರೂ ನಿರ್ಲಕ್ಷ್ಯಿಸಿ‌ ಮತ್ತೆ ಹಲ್ಲೆಗೆ ಯತ್ನಿಸಿದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಲಾಗಿದ್ದು ಆರೋಪಿ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಬಾಲರಾಜ್ ಪಿಸ್ತೂಲ್ ನಿಂದ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಬಲಗಾಲಿಗೆ ತಗುಲಿ ಸ್ಥಳದಲ್ಲಿ ಕುಸಿದುಬಿದ್ದಿದ್ದು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp