ಇಂದೋರ್: ರಾಮ ನವಮಿ ದಿನ ಮಧ್ಯಪ್ರದೇಶದ ಇಂದೋರ್’ನ ದೇವಸ್ಥಾನದಲ್ಲಿ ನಡೆದ ಬಾವಿಯ ನೆಲ ಹಾಸು ಕುಸಿದ ದುರಂತದಲ್ಲಿ ಸತ್ತವರ ಸಂಖ್ಯೆ 35ಕ್ಕೆ ಏರಿದೆ ಹಾಗೂ ನಾಪತ್ತೆಯಾಗಿರುವ ಒಬ್ಬರಿಗಾಗಿ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲೇಶ್ವರ ಮಹಾದೇವ ಜುಲೆಲಾಲ್ ಮಂದಿರದ ಹಳೆಯ ಕಾಲದ ಬಾವ್ಡಿ ಇಲ್ಲವೇ ಮೆಟ್ಟಿಲು ಬಾವಿಯ ಮೇಲೆ ಸ್ಲಾಬ್ ನಿರ್ಮಿಸಲಾಗಿತ್ತು. ನಿನ್ನೆ ಜನರ ಭಾರದಿಂದ ಅದು ಮುರಿದು ಜನರು ಬಾವಿಯೊಳಕ್ಕೆ ಬಿದ್ದಿದ್ದರು. ಇಂದೋರ್ ಪಟೇಲ್ ನಗರದಲ್ಲಿ ಆಲಯವಿದ್ದು, ನಾಲ್ಕು ಶತಮಾನ ಹಳೆಯ ಬಾವಿಯು 20 ಗುಣಿಸು 20 ಅಡಿ ಇದೆ.
ಸೇನೆ, ಎನ್ ಡಿಆರ್ ಎಫ್- ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ, ಎಸ್ ಡಿಆರ್ ಎಫ್- ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ ಜೊತೆಗೆ ನಮ್ಮ ರಕ್ಷಣಾ ಕಾರ್ಯಾಚರಣೆ ನಡೆದು ಅದೀಗ ಮುಗಿದಿದೆ. ಬಾವಿಯಿಂದ ಇಲ್ಲಿಯವರೆಗೆ 35 ದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಇಂದೋರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಇಳಯರಾಜಾ ಮಾಧ್ಯಮದವರಿಗೆ ತಿಳಿಸಿದರು.
ಎಲ್ಲ ದೇಹಗಳು ದೊರೆತಿದ್ದು, ಪಟ್ಟಿ ಮಾಡಿರುವ ಒಬ್ಬರ ದೇಹ ಸಿಕ್ಕಿಲ್ಲ, ನಾಪತ್ತೆ ಎಂದು ಬರೆಯಲಾಗಿದೆ.
ಬಾವಿಯೊಳಗೆ ತುಂಬ ಹೂಳು ತುಂಬಿಕೊಂಡಿದ್ದು, ಇನ್ನೊಂದು ದೇಹ ತೆಗೆಯಲು ಹೂಳು ತೆಗೆಯಬೇಕಾಗುತ್ತದೆ ಎಂದೂ ಇಳಯರಾಜಾ ತಿಳಿಸಿದರು.
16 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅದಕ್ಕೆ ಮೊದಲು ಇಂದೋರ್ ವಿಭಾಗೀಯ (ಕಂದಾಯ) ಕಮಿಷನರ್ ಪವನ್ ಕುಮಾರ್ ಶರ್ಮಾ ಹೇಳಿದರು. ಅಲ್ಲದೆ ಇಬ್ಬರನ್ನು ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಗುರುವಾರ 11.30ರಿಂದಲೇ ಬಾವಿಯಿಂದ ಶವ ತೆಗೆದು ಶವಪರೀಕ್ಷೆಗೆ ಆಸ್ಪತ್ರೆಗಳಿಗೆ ಸಾಗಿಸುವುದು ಆರಂಭವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ತಂಡವು ಕ್ರೇನ್ ಮೂಲಕ ಬಾವಿಗಿಳಿದು ಟ್ರಾಲಿಗಳಲ್ಲಿ ಶವಗಳನ್ನು ಮೇಲೆ ತಂದರು.
ದೇವಾಲಯವು ಒಂದು ಕಿರಿಯ ಸಂದಿಯಲ್ಲಿ ಇದ್ದುದರಿಂದ ಒಂದು ಗೋಡೆಯನ್ನು ಒಡದು ಬಾವಿಯಿಂದ ನೀರೆಲ್ಲ ಹೊರಗೆ ಹಾಕಲು ಪ್ರತ್ಯೇಕ ಸಮಯ ಹಿಡಿಯಿತು. ಭಾರೀ ಜನರು ಬಾವಿಯ ಮೇಲು ಹಾಸಿನ ಮೇಲೆ ನಿಂತದ್ದೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಸ್ಪಷ್ಟ ಪಡಿಸಿದ್ದಾರೆ.