ಟೇಕ್ ಆಫ್ ವೇಳೆ ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ತನಿಖೆಗೆ ಆದೇಶ

Prasthutha|

ನವದೆಹಲಿ: ದೆಹಲಿಯಿಂದ ಬೆಂಗಳೂರಿಗೆ ಟೇಕ್ ಆಫ್ ಆಗಬೇಕಿದ್ದ ಇಂಡಿಗೋ ವಿಮಾನದ ಇಂಜಿನ್ ಗೆ ಬೆಂಕಿ ತಗುಲಿದ ಪರಿಣಾಮ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ ಘಟನೆ ವರದಿಯಾಗಿದೆ.

- Advertisement -

ಶುಕ್ರವಾರ ರಾತ್ರಿ ಇಂಡಿಗೋ ವಿಮಾನ 6e-2131 ಟೇಕ್ ಆಫ್ ಆಗುವ ವೇಳೆ ದಿಢೀರನೇ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನದ ಸಿಬ್ಬಂದಿ ಸೇರಿ ಎಲ್ಲ 184 ಮಂದಿ ಸುರಕ್ಷಿತವಾಗಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಬೆಂಕಿ ತಗುಲಿದ ತಕ್ಷಣ ವಿಮಾನವನ್ನು ನಿಲ್ಲಿಸಿ, ಪ್ರಯಾಣಿಕರನೆಲ್ಲ ಸ್ಥಳಾಂತರ ಮಾಡಿ, ರಾತ್ರಿ 11 ಗಂಟೆಗೆ ಮತ್ತೊಂದು ವಿಮಾನದಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.

- Advertisement -

ಪ್ರಯಾಣಿಕರಲ್ಲಿ ಒಬ್ಬರಾದ ಪ್ರಿಯಾಂಕಾ ಕುಮಾರ್ ಎಂಬವರು ಘಟನೆಯ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ವಿಮಾನದ ಇಂಜಿನ್ ಗಳಲ್ಲಿ ಒಂದಕ್ಕೆ ಬೆಂಕಿ ಹೊತ್ತಿಕೊಂಡು, ಕಿಡಿಗಳು ಹಾರುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಘಟನೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಂಡಿಗೋ ವಿಮಾನ ಸಂಸ್ಥೆ, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಕ್ಷಮೆಯಾಚಿಸಿದೆ.

ವಿಮಾನ ಟೇಕಾಫ್ ಆಗುವ ಸಂದರ್ಭದಲ್ಲೇ ಬೆಂಕಿ ಕಾಣಿಸಿಕೊಂಡಿದ್ದರಿಂದ ವಿಮಾನವನ್ನು ಮತ್ತೆ ಕೆಳಗಿಳಿಸಲಾಯಿತು. ನಾನು ಟೇಕಾಫ್ ವಿಡಿಯೋ ಮಾಡಲು ಮೊಬೈಲ್ ಹೊರತೆಗೆದಿದ್ದೆ. ಆದರೆ, ನನ್ನ ಮೊಬೈಲ್​ ಗೆ ಸೆರೆ ಸಿಕ್ಕ ದೃಶ್ಯ ಇದು ಎಂದು ಪ್ರಯಾಣಿಕರಾದ ಪ್ರಿಯಾಂಕಾ ಕುಮಾರ್ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪ್ರಯಾಣಿಕರು ಸಹಾಯಕ್ಕಾಗಿ ಕೂಗುತ್ತಿರುವಾಗ ವಿಮಾನದ ಇಂಜಿನ್ ಬಳಿಯ ಭಾಗಗಳಿಂದ ಬೆಂಕಿ ಹೊರಬರುವುದನ್ನು ಕಾಣಬಹುದು.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಕ್ಷಣ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಗೆ ಫೋನ್ ಮಾಡಿ ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನದ ಎಂಜಿನ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿವೆ. ಈ ವಿಮಾನದಲ್ಲಿ 177 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಇದ್ದರು.

ಬೆಂಕಿಯ ವಿಡಿಯೋ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನಯಾನ ಸಚಿವಾಲಯ ಈ ಸಂಬಂಧ ವಿವರವಾದ ವರದಿಯನ್ನು ಕೇಳಿದೆ.



Join Whatsapp