ಮಲಪ್ಪುರಂ/ ಕೇರಳ: ಪ್ರಯಾಣಿಕನೊಬ್ಬ ಅಕ್ರಮವಾಗಿ ತಂದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಹೊರಗೆ ಒಯ್ಯಲು ಸಹಕರಿಸಿದ ಇಂಡಿಗೋ ಏರ್‌ಲೈನ್‌ನ ಇಬ್ಬರು ಉದ್ಯೋಗಿಗಳನ್ನು ಬಂಧಿಸಿದ ಘಟನೆ ಇಲ್ಲಿನ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಸಾಜಿದ್ ರಹ್ಮಾನ್ ಮತ್ತು ಗ್ರಾಹಕ ಸೇವಾ ಏಜೆಂಟ್ ಮೊಹಮ್ಮದ್ ಶಾಮಿಲ್‌ನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಅಕ್ರಮವಾಗಿ ಸಾಗಿಸಲೆತ್ನಿಸಿದ ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ 4.9 ಕೆಜಿ ಚಿನ್ನದ ಮಿಶ್ರಣವನ್ನು ವಶಕ್ಕೆ ಪಡೆದಿದ್ದಾರೆ.
ದುಬೈಯಿಂದ ಬಂದಿದ್ದ ವಯನಾಡು ಮೂಲದ ಪ್ರಯಾಣಿಕನೊಬ್ಬ ತಂದಿದ್ದ ಚಿನ್ನ ಇರುವ ಪೆಟ್ಟಿಗೆಯನ್ನು ಹೊರತರಲು ಈ ಇಬ್ಬರು ಸಿಬ್ಬಂದಿಗಳು ಸಹಕರಿಸಿದ್ದಾರೆ. ಈ ಹಿಂದೆಯೂ ಇವರು ಅಕ್ರಮ ಚಿನ್ನ ಸಾಗಾಟಕ್ಕೆ ಸಹಕರಿಸಿದ್ದರೆಂಬ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.