ಕನ್ನಡದಲ್ಲಿ ಬರೆದ ಚೆಕ್‌ ಅಮಾನ್ಯ; ಹೊಣೆಗೇಡಿತನ ತೋರಿದ ಎಸ್‌ಬಿಐಗೆ ರೂ.85 ಸಾವಿರ ದಂಡ ವಿಧಿಸಿದ ಗ್ರಾಹಕರ ಆಯೋಗ

Prasthutha|

ಧಾರವಾಡ: ಚೆಕ್‌ನಲ್ಲಿ ಕನ್ನಡ ಭಾಷೆ ಬಳಸಿರುವುದನ್ನು ಅರ್ಥ ಮಾಡಿಕೊಳ್ಳದೆ ಅಮಾನ್ಯ ಮಾಡಿದ್ದ ಭಾರತೀಯ ಸ್ಟೇಟ್‌ ಬ್ಯಾಂಕ್‌ಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇತ್ತೀಚೆಗೆ ದಂಡ ವಿಧಿಸಿದೆ.

- Advertisement -

ಧಾರವಾಡದ ಕಲ್ಯಾಣ ನಗರ ನಿವಾಸಿ, ಇಂಗ್ಲಿಷ್‌ ಪ್ರಾಧ್ಯಾಪಕರಾದ ವಾದಿರಾಚಾರ್ಯ ಇನಾಮಾದಾರ ಅವರ ಚೆಕ್‌ ಅನ್ನು ಅಮಾನ್ಯ ಮಾಡಿದ್ದ ಎಸ್‌ಬಿಐ ನಡೆಗೆ ಆಕ್ಷೇಪಿಸಿ ಸಲ್ಲಿಸಿದ್ದ ದೂರಿನ ವಿಚಾರಣೆಯನ್ನು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿ ಎ ಬೋಳಶೆಟ್ಟಿ ಮತ್ತು ಪಿ ಸಿ ಹಿರೇಮಠ ಅವರ ನೇತೃತ್ವದ ಪೀಠ ನಡೆಸಿ, ಆದೇಶ ಮಾಡಿದೆ.

“ಚೆಕ್‌ನಲ್ಲಿ ಕನ್ನಡ ಭಾಷೆ ಬಳಸಿದ್ದನ್ನು ಅರ್ಥಮಾಡಿಕೊಳ್ಳದೇ ಮತ್ತು ಕನ್ನಡ ಭಾಷೆಯ ಬಗ್ಗೆ ತೀರಾ ಅಸಡ್ಡೆ ಹಾಗೂ ಹೊಣೆಗೇಡಿತನವನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸಿಬ್ಬಂದಿ ಪ್ರದರ್ಶಿಸಿ, ದೂರುದಾರರ ಚೆಕ್‌ ಅಮಾನ್ಯ ಮಾಡಿರುವುದು ಖೇದಕರ ಸಂಗತಿ” ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶದಲ್ಲಿ ಉಲ್ಲೇಖಿಸಿದ್ದು, ಎಸ್‌ಬಿಐಗೆ ಈಚೆಗೆ ಒಟ್ಟು ರೂ. 85,177 ದಂಡ ವಿಧಿಸಿದೆ.

- Advertisement -

ದೂರುದಾರರಾದ ವಾದಿರಾಚಾರ್ಯ ಇನಾಮಾದಾರ ಅವರ 6 ಸಾವಿರ ಮೌಲ್ಯದ ಚೆಕ್‌ ಅನ್ನು ಅಮಾನ್ಯ ಮಾಡಿ, ಅದಕ್ಕಾಗಿ ಎಸ್‌ಬಿಐ ರೂ.177 ದಂಡ ವಿಧಿಸಿರುವುದು ಮತ್ತು ಅವರಿಗೆ ಆಗಿರುವ ಮುಜುಗರ, ಮಾನಸಿಕ ಮತ್ತು ದೈಹಿಕ ನೋವಿಗೆ ರೂ.50,000 ದಂಡ ವಿಧಿಸಲಾಗಿದೆ. ತಮ್ಮದೇ ದಾಖಲೆಗಳಿಗೆ ವ್ಯತಿರಿಕ್ತವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಪ್ರತಿರಕ್ಷಣೆ (ಡಿಫೆನ್ಸ್)‌ ಮೂಲಕ ದೂರುದಾರರ ಪ್ರಕರಣವನ್ನು ವಿಫಲಗೊಳಿಸಲು ಪ್ರಯತ್ನಿಸಿದ್ದಕ್ಕಾಗಿ ರೂ.25,000 ಹಾಗೂ ಪ್ರಕರಣದ ಖರ್ಚು-ವೆಚ್ಚದ ಬಾಬ್ತಿನ ರೂಪದಲ್ಲಿ ರೂ.10,000 ಒಳಗೊಂಡು ರೂ.85,177 ಅನ್ನು ಸೆಪ್ಟೆಂಬರ್‌ 1ರಿಂದ ಮುಂದಿನ ಒಂದು ತಿಂಗಳಲ್ಲಿ ಎಸ್‌ಬಿಐ ಪಾವತಿಸಬೇಕು. ಇಲ್ಲವಾದಲ್ಲಿ ಚೆಕ್‌ ಅಮಾನ್ಯ ಮಾಡಲಾದ 2020ರ ಸೆಪ್ಟೆಂಬರ್‌ 5ರಿಂದ ದಂಡದ ಹಣ ಪಾವತಿ ಮಾಡುವವರೆಗೆ ಶೇ. 8ರಷ್ಟು ಬಡ್ಡಿ ದರ ಸೇರಿ ಹಣವನ್ನು ಪಾವತಿಸಬೇಕು” ಎಂದು ಆಯೋಗ ಆದೇಶಿಸಿದೆ.

“ದೂರುದಾರರು ಕನ್ನಡ ಭಾಷೆ ಅಂಕಿ-ಸಂಖ್ಯೆಯಲ್ಲಿ ಚೆಕ್‌ ಬರೆದು ವಿದ್ಯುತ್‌ ಶುಲ್ಕ ಪಾವತಿಯ ಭಾಗವಾಗಿ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿಗೆ ನೀಡಿದ್ದಾರೆ. ಚೆಕ್‌ನಲ್ಲಿ ಕನ್ನಡ ಭಾಷೆ ಬಳಸಿದ್ದನ್ನು ಅರ್ಥಮಾಡಿಕೊಳ್ಳದೇ ಮತ್ತು ಕನ್ನಡ ಭಾಷೆಯ ಬಗ್ಗೆ ತೀರಾ ಅಸಡ್ಡೆ ಹಾಗೂ ಹೊಣೆಗೇಡಿತನವನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸಿಬ್ಬಂದಿ ಪ್ರದರ್ಶಿಸಿ, ದೂರುದಾರರ ಚೆಕ್‌ ಅಮಾನ್ಯ ಮಾಡಿರುವುದು ಖೇದಕರ ಸಂಗತಿ. ತಮ್ಮ ದೂರಿನಲ್ಲಿ ಇನಾಮಾದಾರ ಅವರು ಬ್ಯಾಂಕ್‌ ಸಿಬ್ಬಂದಿ ಮನೋಭಾವದ ಬಗ್ಗೆ ಹೇಳಿರುವ ವಿಷಯ ಸತ್ಯದಿಂದ ಕೂಡಿರುವುದರಿಂದ ಅಂತಹ ಸಂಗತಿಯನ್ನು ತಳ್ಳಿ ಹಾಕಲಾಗದು” ಎಂದು ಆಯೋಗ ಆದೇಶದಲ್ಲಿ ಉಲ್ಲೇಖಿಸಿದೆ.

“ದೂರುದಾರರ ಖಾತೆಯಲ್ಲಿ ರೂ.9 ಲಕ್ಷಕ್ಕೂ ಹೆಚ್ಚಿನ ಹಣವಿದ್ದರೂ ಎಸ್‌ಬಿಐ ಸಿಬ್ಬಂದಿ ರೂ.6 ಸಾವಿರ ಮೌಲ್ಯದ ಚೆಕ್‌ ಅಮಾನ್ಯಗೊಳಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇನಾಮದಾರ ಅವರು ಸಲ್ಲಿಸಿರುವ ಗಣಕೀಕೃತ ದೂರು, ಮುಖ್ಯ ವಿಚಾರಣೆಯ ಅಫಿಡವಿಟ್‌ನಲ್ಲಿ ಅವರು ಬಳಸಿರುವ ಭಾಷೆ ನೋಡಿದಾಗ, ವೃತ್ತಿಯಿಂದ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರೂ ಅವರೊಬ್ಬ ಅಪ್ಪಟ ಕನ್ನಡ ಅಭಿಮಾನಿ ಎಂದು ತಿಳಿಯುತ್ತದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

“ಚೆಕ್‌ ಅಮಾನ್ಯ ಮಾಡಿರುವುದು ಸಿಬ್ಬಂದಿಯ ತಪ್ಪಿನಿಂದಾಗಿ ಎಂದು ಲಿಖಿತ ಆಕ್ಷೇಪಣೆ ಮತ್ತು ಮುಖ್ಯ ವಿಚಾರಣೆಯ ಅಫಿಡವಿಟ್‌ನಲ್ಲಿ ಉಲ್ಲೇಖಿಸಿ, ನ್ಯಾಯಾಂಗ ಅಧಿಕಾರ ವ್ಯಾಪ್ತಿ ಹೊಂದಿರುವ ಆಯೋಗದ ಮುಂದೆ ಎಸ್‌ಬಿಐ ಪ್ರಾಮಾಣಿಕತೆ ತೋರಬಹುದಿತ್ತು. ಚೆಕ್‌ ಅಮಾನ್ಯ ಮಾಡಿರುವುದಕ್ಕೆ ಎಸ್‌ಬಿಐ ಶುಲ್ಕ ವಿಧಿಸಿರುವುದು ಪಾಸ್‌ಬುಕ್‌ನಲ್ಲಿ ಉಲ್ಲೇಖವಾಗಿದೆ. ಈ ದಾಖಲೆಗೆ ವ್ಯತಿರಿಕ್ತವಾಗಿ ಸಾರ್ವಜನಿಕ ಉದ್ದಿಮೆಯಾದ ಎಸ್‌ಬಿಐ ಉದ್ದೇಶಪೂರ್ವಕ ಸುಳ್ಳು ಪ್ರತಿರಕ್ಷಣೆ ತೆಗೆದುಕೊಂಡಿದೆ. ಈ ಮೂಲಕ ದಿವ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಚೆಕ್‌ ಅಮಾನ್ಯ ಮಾಡಿ, ನಗದುಗೊಳಿಸಲು ಚೆಕ್‌ ನಮ್ಮ ಬಳಿ ಬಂದಿಲ್ಲ ಎಂದು ಎಸ್‌ಬಿಐ ಸುಳ್ಳು ಪ್ರತಿರಕ್ಷಣೆ ವಾದ ಮಂಡಿಸಿರುವುದು ವಿಷಾದದ ಸಂಗತಿ. ಇದಕ್ಕಾಗಿ ಎಸ್‌ಬಿಐ ಅಧಿಕಾರ ವರ್ಗ ಮತ್ತು ಅದರ ಕಾನೂನು ಪದಕೋಶವನ್ನು ದೂಷಿಸಬೇಕಿದೆ. ಸುಳ್ಳು ಪ್ರತಿರಕ್ಷಣೆ ತೆಗೆದುಕೊಳ್ಳುವ ಇಂತಹ ಸಂಸ್ಥೆಗಳಿಗೆ ಇದು ತಪ್ಪು ಎಂಬ ಸಂದೇಶ ರವಾನಿಸಬೇಕಿದೆ” ಎಂದು ಆಯೋಗ ಹೇಳಿದೆ.

ಪ್ರಕರಣದ ಹಿನ್ನೆಲೆ: ದೂರುದಾರ ಇನಾಮದಾರ ಅವರು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿಗೆ ವಿದ್ಯುತ್‌ ಶುಲ್ಕದ ಭಾಗವಾಗಿ 2020ರ ಸೆಪ್ಟೆಂಬರ್‌ 3ರಂದು ರೂ.6,000 ಚೆಕ್‌ ನೀಡಿದ್ದರು. ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿಯು ತನ್ನ ಖಾತೆ ಹೊಂದಿರುವ ಹಿಂದಿನ ಸಿಂಡಿಕೇಟ್‌ ಬ್ಯಾಂಕ್‌ ಹಾಲಿ ಕೆನರಾ ಬ್ಯಾಂಕ್‌ಗೆ ಹಣ ನಗದು ಮಾಡಿಕೊಳ್ಳಲು ಚೆಕ್‌ ಹಾಕಿದೆ. ಸದರಿ ಬ್ಯಾಂಕ್‌ ದೂರುದಾರ ಇನಾಮದಾರ ಅವರ ಖಾತೆ ಇರುವ ಬ್ಯಾಂಕ್‌ಗೆ ಚೆಕ್‌ ಕಳುಹಿಸಿಕೊಟ್ಟಿತ್ತು. ಆದರೆ, ಇದನ್ನು ಎಸ್‌ಬಿಐ 2020ರ ಸೆಪ್ಟೆಂಬರ್‌ 5ರಂದು ದೂರುದಾರರ ಖಾತೆಯಲ್ಲಿ₹9 ಲಕ್ಷಕ್ಕೂ ಅಧಿಕ ಮೊತ್ತವಿದ್ದರೂ ಅಮಾನ್ಯಗೊಳಿಸಿ, ವಾಪಸ್‌ ಮಾಡಿತ್ತು.

ಅಲ್ಲದೇ, ಈ ಸಂಬಂಧ ಇನಾಮದಾರ ಅವರ ಖಾತೆಯಲ್ಲಿ ರೂ.177 ರೂಪಾಯಿ ಶುಲ್ಕವನ್ನೂ ಎಸ್‌ಬಿಐ ಕಡಿತ ಮಾಡಿತ್ತು. ಇದು ಇನಾಮದಾರ ಅವರ ಬ್ಯಾಂಕ್‌ ಪಾಸ್‌ಬುಕ್‌ನಲ್ಲಿ ಮುದ್ರಿತವಾಗಿದೆ. ಚೆಕ್‌ ವಾಪಸಾಗಿರುವುದಕ್ಕೆ ಕೆನರಾ ಬ್ಯಾಂಕ್‌ “ಚೆಕ್‌ ಅವಧಿ ಮೀರಿದ್ದಾಗಿದೆ ಎಂದು ಅದನ್ನು ಎಸ್‌ಬಿಐ ತಿರಸ್ಕರಿಸಿದೆ” ಎಂದು 2020ರ ಸೆಪ್ಟೆಂಬರ್‌ 5ರಂದು ಹಿಂಬರಹ ನೀಡಿತ್ತು.

ಆದರೆ, ಇನಾಮದಾರ ಅವರು ದಾವೆ ಹೂಡಿದ ಸಂದರ್ಭದಲ್ಲಿ ಚೆಕ್‌ ನಗದಿಗಾಗಿ ತಮ್ಮ ಬ್ಯಾಂಕ್‌ಗೆ ಬಂದಿಲ್ಲ ಎಂದು ಎಸ್‌ಬಿಐ ವಾದಿಸಿತ್ತು. ಈ ಮೂಲಕ ಸುಳ್ಳು ಪ್ರತಿರಕ್ಷಣೆ ವಾದ ಮಂಡಿಸಿತ್ತು. ಇದನ್ನು ಪ್ರಶ್ನಿಸಿ ಇನಾಮದಾರ ಅವರು ಗ್ರಾಹಕರ ರಕ್ಷಣಾ ಕಾಯಿದೆ 2019ರ ಸೆಕ್ಷನ್‌ 35ರ ಅಡಿ ರೂ.50 ಸಾವಿರ ಪರಿಹಾರ ಮತ್ತು ಕಾನೂನಿನ ವೆಚ್ಚವನ್ನು ಎಸ್‌ಬಿಐ ಕಡಿಯಿಂದ ಕೊಡಿಸುವಂತೆ ಮನವಿ ಮಾಡಿದ್ದರು.

(ಕೃಪೆ: ಬಾರ್ ಆ್ಯಂಡ್ ಬೆಂಚ್)



Join Whatsapp