ನವದೆಹಲಿ: ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದೇಕೆ? ಈ ಪ್ರಶ್ನೆಗೆ ಮುಂದಿನ ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ವಿರೋಧ ಪಕ್ಷಗಳ ನಾಯಕರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ತಾನು ನೀಡುತ್ತಿರುವ ಕೊನೆಯ ನೋಟಿಸ್ ಇದಾಗಿದ್ದು, ಇನ್ನು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಕೇಂದ್ರ ಸರ್ಕಾರದಿಂದಲೂ ಪ್ರತಿಕ್ರಿಯೆ ಕೋರಿ ನೋಟಿಸ್ ಜಾರಿ ಮಾಡಿದೆ.
ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 10 ರಂದು ನಡೆಯಲಿದೆ. ದೆಹಲಿ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾಯಮೂರ್ತಿ ಮನ್ಮೀತ್ ಪ್ರೀತಂ ಸಿಂಗ್ ಅರೋರಾ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕಳೆದ ವರ್ಷ ವಿರೋಧ ಪಕ್ಷಗಳ ಒಕ್ಕೂಟ ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರನ್ನು ಇಟ್ಟಿದ್ದರ ವಿರುದ್ಧ ಗಿರೀಶ್ ಭಾರದ್ವಾಜ್ ಎನ್ನುವ ವ್ಯಕ್ತಿ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು.
ವಿರೋಧ ಪಕ್ಷಗಳು ‘ಇಂಡಿಯಾ’ ಎಂಬ ಹೆಸರನ್ನು ಬಳಸದಂತೆ ತಡೆಯಬೇಕು ಎಂದು ಭಾರದ್ವಾಜ್ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ದೇಶದ ಹೆಸರನ್ನು ತಮ್ಮ ಮೈತ್ರಿಗೆ ಇಟ್ಟುಕೊಳ್ಳುವ ಮೂಲಕ ಇದರ ದೇಶದ ಜನಪ್ರಿಯ ಹೆಸರಿನ ಲಾಭವನ್ನು ಪಡೆದುಕೊಳ್ಳುತ್ತಿದೆ. ಏಪ್ರಿಲ್ 19 ರಿಂದ ಲೋಕಸಭೆ ಚುನಾವಣೆಗೆ ಮತದಾನ ಆರಂಭವಾಗಲಿದ್ದು, ಈ ವಿಚಾರವನ್ನು ಆದಷ್ಟು ಶೀಘ್ರವಾಗಿ ವಿಚಾರಣೆ ಮಾಡಬೇಕು ಎಂದಿದ್ದರು. ಆದರೆ, ದೆಹಲಿ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು.