ಢಾಕಾ: ಬಾಂಗ್ಲಾದೇಶದದ ಹಿಂದೂಗಳ ಸುರಕ್ಷತೆ ಕುರಿತು ಭಾರತ ಹೊರಹಾಕಿರುವ ಆತಂಕ ಉತ್ಪ್ರೇಕ್ಷೆಯಾಗಿದೆ ಎಂದು ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಪ್ರತಿಕ್ರಿಯಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಯೂನುಸ್, ಬಾಂಗ್ಲಾದಲ್ಲಿ ನಡೆದಿರುವುದು ರಾಜಕೀಯ ಪ್ರೇರಿತ ದಾಳಿಗಳೇ ಹೊರತು ಕೋಮು ಆಧಾರಿತ ದಾಳಿಗಳಲ್ಲ ಎಂದಿದ್ದಾರೆ.
ಹೆಚ್ಚಿನ ಹಿಂದೂಗಳು ಹಸೀನಾ ನೇತೃತ್ವದ ಅವಾಮಿ ಲೀಗ್ ಬೆಂಬಲಿಗರಾದ ಕಾರಣ ಆ ಪಕ್ಷದ ವಿರುದ್ಧ ದಾಳಿಗಳಿಗೆ ಹಿಂದೂಗಳೂ ಗುರಿಯಾಗಿದ್ದಾರೆ ಎಂದು ಮುಹಮ್ಮದ್ ಯೂನುಸ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾತ್ಮಕ ದಾಳಿಗಳ ಬಗ್ಗೆ ಭಾರತ ಕಳವಳ ಪ್ರಶ್ನಿಸಿದ್ದು, ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯ ವಿಷಯ ಉತ್ಪ್ರೇಕ್ಷೆಗೊಳಿಸಲಾಗಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಯು ಕೋಮುವಾದಕ್ಕಿಂತ ಹೆಚ್ಚು ರಾಜಕೀಯವಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭ, ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಕುರಿತು ಮಾತನಾಡಿದ ಅವರು, ಹಸೀನಾ ಸದ್ಯ ಭಾರತದಲ್ಲಿ ಇರುವುದಾದರೆ ತೆಪ್ಪಗಿರಲಿ ಎಂದು ಸಂದೇಶ ಕಳುಹಿಸಿದ್ದಾರೆ.
ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲು ನಾವು ಕೋರಿಕೊಳ್ಳುವವರೆಗೂ ಭಾರತ- ಬಾಂಗ್ಲಾ ನಡುವಿನ ವೈ ಮನಸ್ಸು ತಪ್ಪಿಸಲು ಅವರು ಮೌನವಾಗಿರಬೇಕಾಗುತ್ತದೆ ಎಂದು ಯೂನುಸ್ ತಿಳಿಸಿದ್ದಾರೆ.