ನವದೆಹಲಿ: ಭಾರತವು ಸುಡಾನಿನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ಬಗ್ಗೆ ನಾನಾ ಮಿತ್ರ ದೇಶಗಳ ಜೊತೆಗೆ ಸಂವಹನ ನಡೆಸುತ್ತಿದ್ದು, ಹಿಂಸಾಚಾರ ನಡೆದಿರುವ ಸುಡಾನಿನಲ್ಲಿನ ಸ್ವದೇಶಿಯರ ಬಗ್ಗೆ ಭಾರತವು ಯುಎಸ್ಎ, ಬ್ರಿಟನ್, ಸೌದಿ ಅರೇಬಿಯಾ ಮತ್ತು ಯುಎಇ ಜೊತೆಗೆ ಮಾತುಕತೆ ನಡೆಸಿದೆ.
ಸುಡಾನಿನಲ್ಲಿ ಪರಿಸ್ಥಿಯು ತೀರಾ ಉದ್ವಿಗ್ನತೆಯದಾಗಿದ್ದು ಈ ಘಟ್ಟದಲ್ಲಿ ಜನರು ಆಚೀಚೆ ಹೋಗುವುದು ತೀರಾ ಅಪಾಯಕಾರಿಯೂ ಆಗಿದೆ.
ಕಳೆದ ಆರು ದಿನಗಳಿಂದ ಸುಡಾನಿನ ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಪರಸ್ಪರ ಹೋರಾಟದಲ್ಲಿ ತೊಡಗಿಕೊಂಡಿವೆ. ಈ ಕದನದಲ್ಲಿ 100ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.
ಕೂಡಲೇ ಸಂಘರ್ಷವನ್ನು ನಿಲ್ಲಿಸುವಂತೆ ಯುಎಸ್’ಎ ಸಹ ಇರುವ ಜಿ7 ದೇಶ ಕೂಟವು ಮಂಗಳವಾರ ಮನವಿ ಮಾಡಿದೆ. ಮುಂಡಾಸು ಮತ್ತು ಸಮವಸ್ತ್ರದಲ್ಲಿ ಮಿಲಿಟರಿಯವರು ತಿರುಗುತ್ತಿರುವ ಖಾರ್ಟೂಮ್ ನಲ್ಲಿ ಇಂದು ಭಾರೀ ಸ್ಫೋಟವೊಂದು ನಡೆದಿದೆ.
ಪರಿಸ್ಥಿತಿ ನೋಡಿ ಸಹಾಯ ಮಾಡುವುದಾಗಿ ಸೌದಿ ಮತ್ತು ಯುಎಇ ಆಶ್ವಾಸನೆ ನೀಡಿವೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯರು ಹೊರಗೆ ಓಡಾಡದಂತೆ ಮತ್ತು ಶಾಂತಿಯಿಂದಿರುವಂತೆ ಭಾರತವು ಕೇಳಿಕೊಂಡಿದೆ.
ಖಾರ್ಟೂಮ್ ನಲ್ಲಿ ನಿನ್ನೆ ಭಾರತೀಯನೊಬ್ಬ ಗುಂಡೇಟಿನಿಂದ ಸಾವನ್ನಪ್ಪಿರುವುದಾಗಿ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಸುಡಾನಿನ ಸದ್ಯದ ಸ್ಥಿತಿಯ ಬಗೆಗೆ ಎಲ್ಲ ಬಗೆಯ ಮಾಹಿತಿ ಮತ್ತು ಸಹಾಯಕ್ಕಾಗಿ ಭಾರತದ ವಿದೇಶಾಂಗ ಸಚಿವಾಲಯವು 24*7 ಕಾರ್ಯವೆಸಗುವ ಕಂಟ್ರೋಲ್ ರೂಂ ತೆರೆದಿದೆ.