ಒಟ್ಟಾವಾ: ಕೆನಡಾದ ಮಿಸ್ಸಿಸೌಗಾ ನಗರದಲ್ಲಿ ದೀಪಾವಳಿ ಹಬ್ಬದ ರಾತ್ರಿ ಸುಮಾರು 400-500 ಜನರ ಗುಂಪಿನ ಮಧ್ಯೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಒಂದು ಕಡೆ ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದಿದ್ದರೆ, ಮತ್ತೊಂದು ಕಡೆ ಖಲಿಸ್ತಾನಿ ಪರ ಬ್ಯಾನರ್ ಹಿಡಿದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಘಟನೆಯ ಕುರಿತು ಟ್ವೀಟ್ ಮಾಡಿದ ಸ್ಥಳೀಯ ಪೀಲ್ ಪೊಲೀಸ್ ಅಧಿಕಾರಿಗಳು ರಾತ್ರಿ ಸುಮಾರು 9.41ಕ್ಕೆ ಗೋರ್’ವೇ ಮತ್ತು ಎಟುಡು ಡ್ರೈವ್ ಪ್ರದೇಶದಲ್ಲಿ ಹೊಡೆದಾಡಿದ ಕುರಿತು ದೂರು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಪಾರ್ಕಿಂಗ್ ಸ್ಥಳದಲ್ಲಿ ಜಗಳ ನಡೆದಿದೆ ಎಂಬ ವರದಿಗಳು ನಮಗೆ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದು, ವೈದ್ಯಾಧಿಕಾರಿಗಳು ಘಟನಾ ಸ್ಥಳದಲ್ಲಿ ಒಬ್ಬ ಪುರುಷ ರೋಗಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿ ಜನರ ದೊಡ್ಡ ಗುಂಪು ಜಮಾವಣೆಗೊಂಡು, ಅವ್ಯಾಚ ಶಬ್ದಗಳನ್ನು ಬಳಸಿ ಪರಸ್ಪರ ಕಿರುಚುತ್ತಿದ್ದರು. ಆದರೆ ಅವರ ನಡುವೆ ಯಾವುದೇ ರೀತಿಯ ದೊಡ್ಡಮಟ್ಟದ ಜಗಳ ನಡೆದಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಹೇಳಲಾಗಿದೆ.
ದೀಪಾವಳಿ ಆಚರಣೆ ತೊಡಗಿದ್ದ ಎರಡು ದೊಡ್ದ ಗುಂಪು ಪರಸ್ಪರ ಘರ್ಷಣೆ ತೊಡಗಿದ್ದು, ಇದನ್ನು ಪೀಲ್ ಪೊಲೀಸರು ಚದುರಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಪಟಾಕಿಗಳಲ್ಲಿ ಉಂಟಾದ ಕಸವನ್ನು ಘಟನಾ ಸ್ಥಳದಲ್ಲಿ ಎಸೆದಿರುವುದೇ ಘರ್ಷಣೆಗೆ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.