ಭಾರತ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಮಹಿಳಾ ತಂಡಗಳನ್ನು ಒಳಗೊಂಡ ಟಿ20 ತ್ರಿಕೋನ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಜನವರಿ 19 ರಿಂದ ಫೆಬ್ರವರಿ 2ರವರೆಗೆ ಪೂರ್ವ ಲಂಡನ್‌ನಲ್ಲಿರುವ ಬಫಲೋ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ 3 ತಂಡಗಳು ತಲಾ 2 ಪಂದ್ಯಗಳಂತೆ ಒಟ್ಟು 6 ಪಂದ್ಯಗಳನ್ನಾಡಲಿದೆ.
2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಫೆಬ್ರವರಿ 10 ರಿಂದ 26 ರವರೆಗೆ ಕೇಪ್‌ಟೌನ್, ಪಾರ್ಲ್ ಮತ್ತು ಜಿಕೆಬೆರ್ಹಾದಲ್ಲಿ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯಲಿದೆ. ಈ ಹಿನ್ನಲೆಯಲ್ಲಿ ಹರಿಣಗಳ ನೆಲದಲ್ಲಿ ಆಯೋಜನೆಯಾಗಿರುವ ಟಿ20 ಸರಣಿ ಮೂರೂ ತಂಡಗಳಿಗೆ ಪೂರ್ವ ತಯಾರಿಗೆ ಉತ್ತಮ ವೇದಿಕೆ ಒದಗಿಸಿದೆ.
ವೆಸ್ಟ್ ಇಂಡೀಸ್ ತಂಡವು 2016ರಲ್ಲಿ ಟಿ20 ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಭಾರತವು 2020ರ ಆವೃತ್ತಿಯಲ್ಲಿ ಫೈನಲ್ ತಲುಪಿತ್ತಾದರೂ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು.
ಮುಂಬರುವ ಟಿ20 ವಿಶ್ವಕಪ್‌ನ ಎ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಐದು ಬಾರಿಯ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡಗಳಿದ್ದರೆ, ಗ್ರೂಪ್ 2ರಲ್ಲಿ ಭಾರತ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಐರ್ಲೆಂಡ್ ತಂಡಗಳಿವೆ .
ತ್ರಿಕೋನ ಸರಣಿಯ ವೇಳಾಪಟ್ಟಿ
ಜನವರಿ 19: ಭಾರತ vs ದಕ್ಷಿಣ ಆಫ್ರಿಕಾ
ಜನವರಿ 21 ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್
ಜನವರಿ 23 ಭಾರತ vs ವೆಸ್ಟ್ ಇಂಡೀಸ್
ಜನವರಿ 25: ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್
ಜನವರಿ 28: ಭಾರತ vs ದಕ್ಷಿಣ ಆಫ್ರಿಕಾ
ಜನವರಿ 30: ಭಾರತ vs ವೆಸ್ಟ್ ಇಂಡೀಸ್
ಫೆಬ್ರವರಿ 2: ಫೈನಲ್