ಅನಿವಾಸಿ ಭಾರತೀಯರಿಗೆ 76ನೇ ಸ್ವಾತಂತ್ರ್ಯೋತ್ಸವದ ಕಂಪನ್ನು ಹಂಚಿದ ಇಂಡಿಯನ್ ಸೋಶಿಯಲ್ ಫೋರಂ

Prasthutha|

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಸೆಂಟ್ರಲ್ ಕಮಿಟಿ, ಸೌದಿ ಅರೇಬಿಯಾ ವತಿಯಿಂದ 76ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ರಿಯಾದ್‌ ನ ಮಲಝ್ ನಲ್ಲಿರುವ ಅಲ್-ಮಾಸ್ ಆಡಿಟೋರಿಯಂ‌ನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಯಿತು.

- Advertisement -

 ಕಾರ್ಯಕ್ರಮ ಐಕ್ಯತಾ ಗಾನದೊಂದಿಗೆ ಪ್ರಾರಂಭಿಸಲಾಯಿತು. ರಿಯಾದ್‌ ನಾದ್ಯಂತ ನೆಲೆಸಿರುವ ವಿವಿಧ ರಾಜ್ಯಗಳ ಅನಿವಾಸಿ ಭಾರತೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  ಕಾರ್ಯಕ್ರಮವನ್ನು ಉದ್ಘಾಟನೆಗೈದು ಮಾತನಾಡಿದ ಇಂಡಿಯನ್ ನ್ಯಾಷನಲ್ ಫೋರಮ್ ನ ಅಧ್ಯಕ್ಷ ಅಬ್ದುಲ್ ಅಹದ್ ಸಿದ್ದಿಕಿ, ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಶ್ರಮಿಸಿದಂತಹ ಹೋರಾಟಗಾರರ ಕೊಡುಗೆ ಮತ್ತು ತ್ಯಾಗವನ್ನು ಸದಾ ನೆನೆಯುತ್ತಾ ಮುಂದಿನ ಪೀಳಿಗೆಗೂ ಮುಟ್ಟಿಸುವಂತಿರಬೇಕು ಎಂದು ಹೇಳಿದರು.

- Advertisement -

ಇಂಡಿಯನ್ ಸೋಶಿಯಲ್ ಫೋರಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೈಜ ಸ್ವಾತಂತ್ರ್ಯದ ಅರ್ಥ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಅದನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ವಿವರಿಸಿದರು.

 ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ವಿಷಯ ಮಂಡಿಸಿದ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕೇಂದ್ರ ಸಮಿತಿ ಕಾರ್ಯಕಾರಿ ಸದಸ್ಯ ಸಜ್ಜಾದ್ ಬೆಂಗಳೂರು ತಮ್ಮ ಭಾಷಣದಲ್ಲಿ, ದೇಶವನ್ನು ಬ್ರಿಟಿಷರ ಬಂಧನದಿಂದ ಮುಕ್ತಗೊಳಿಸಲು ಹೋರಾಡಿದಂತಹ ವೀರರ ಅವಿರತ ಶ್ರಮ ಹಾಗೂ ಬಲಿದಾನವನ್ನು ನೆರೆದಿದ್ದ ಸಭಿಕರಿಗೆ ಮನದಟ್ಟು ಮಾಡಿದರು.

ಇಂದು ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಕಾರ್ಯ ಎಲ್ಲೆಡೆ ನಡೆಯುತ್ತಿದ್ದು, ಸಾಮಾಜಿಕ ನ್ಯಾಯದ ಮೂಲಕ ಮರುಕಲ್ಪಿಸುವ ಕಾರ್ಯದ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮೊಳಗಿದ ಘೋಷಣೆಗಳು ಯುವಕರನ್ನು ಒಗ್ಗೂಡಿಸಲು ಹೇಗೆ ಪ್ರೇರೇಪಿಸಿತು ಮತ್ತು ಹೋರಾಟಕ್ಕೆ ದುಮುಕಲು ಸಹಕಾರಿಯಾಯಿತು ಎಂದು ಅದರ ಮಹತ್ವವನ್ನು ವಿವರಿಸಿದ ಅವರು, ಭಾರತದಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ವಿಭಜಕ ರಾಜಕೀಯ ನೀತಿಯಿಂದ ಅನಿವಾಸಿ ಭಾರತೀಯರು ಜಾಗೃತಗೊಳ್ಳಬೇಕು ಮತ್ತು ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು.

ಡಾ. ನಯೀಮ್ ಶರೀಫ್ (ಅಸೋಸಿಯೇಟ್ ಕನ್ಸಲ್ಟೆಂಟ್, ಕಿಂಗ್ ಸೌದ್ ಮೆಡಿಕಲ್ ಸಿಟಿ ರಿಯಾದ್), ಅಬ್ರಾರ್ ಹುಸೇನ್ (ಅಧ್ಯಕ್ಷರು, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘ ರಿಯಾದ್), ಜವಾಹರ್ ಸವಾರಿಮುತ್ತು (ಮಾಜಿ ಅಧ್ಯಕ್ಷರು, ರಿಯಾದ್ ತಮಿಳು ಸಂಘ), ಗಫೂರ್ ಕೊಯಿಲಾಂಡಿ (ಅಧ್ಯಕ್ಷರು, ಮಲಬಾರ್ ಡೆವಲಪ್ಮೆಂಟ್ ಫೋರಂ), ಬಶೀರ್ ಇಂಗಪುಯ (ಅಧ್ಯಕ್ಷರು ಇಂಡಿಯನ್ ಫ್ರಟೆರ್ನಿಟಿ ಫೋರಂ ರಿಯಾದ್) ಇವರು ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸ್ವಾತಂತ್ರ್ಯ ದಿನಾಚರಣೆಯ ಕಿರು ಸಂದೇಶವನ್ನು ನೀಡಿದರು.

ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕೇಂದ್ರ ಸಮಿತಿ ಕಾರ್ಯಕಾರಿ ಸದಸ್ಯರಾದ ಅಜ್ಮಲ್ ಖಾನ್ ಧನ್ಯವಾದ ಸಮರ್ಪಿಸಿದರು ಹಾಗು ಅಬ್ದುಲ್ ಮಜೀದ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಭಾರತದ ರಾಷ್ಟ್ರಗೀತೆಯನ್ನು ನುಡಿಸುವ ಮೂಲಕ ಮುಕ್ತಾಯಗೊಳಿಸಲಾಯಿತು.



Join Whatsapp