ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯಿಂದ ಭಾರತೀಯನ ಜನಾಂಗೀಯ ನಿಂದನೆ

Prasthutha|

ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲಿ ಹಿಂದೂ ಕೊಳಕ, ಅಸಹ್ಯಕರ ನಾಯಿಯಂತೆ ಕಾಣುತ್ತಿದ್ದೀಯಾ ಎಂದು ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ಜನಾಂಗೀಯ ನಿಂದನೆಗೈದಿರುವ ಘಟನೆ ವರದಿಯಾಗಿದೆ. ಟೆಕ್ಸಾಸ್ ನಲ್ಲಿ ನಾಲ್ವರು ಹಿಂದೂ ಮಹಿಳೆಯರನ್ನು ನಿಂದಿಸಿದ ಘಟನೆ ನಡೆದ ಬೆನ್ನಿಗೆ ಈ ನಿಂದನೆ ವರದಿಯಾಗಿದೆ.

- Advertisement -

ಕ್ಯಾಲಿಫೋರ್ನಿಯಾ ಫ್ರೆಮೆಂಟಿನ ಗ್ರಿಮೆರ್ ಬುಲೆವಾರ್ಡ್ ನ ಟಾಕೋ ಬೆಲ್ ನಲ್ಲಿ ಕೃಷ್ಣನ್ ಜಯರಾಮನ್ ನಿಂದನೆಗೊಳಗಾದವರು. ನಿಂದಿಸಿದಾತನನ್ನು 37ರ ಪ್ರಾಯದ ಸಿಂಗ್ ತೇಜಿಂದರ್ ಎಂದು ಗುರುತಿಸಲಾಗಿದೆ.

ಫ್ರೆಮಾಂಟ್ ಪೊಲೀಸರು, ಶಾಂತಿ ಭಂಗ ಮತ್ತು ಜನಾಂಗೀಯ ನಿಂದನೆಗಾಗಿ ಯೂನಿಯನ್ ಸಿಟಿಯ ತೇಜಿಂದರ್ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ಅವರ ಚಾರ್ಜ್ ಶೀಟ್ ನಲ್ಲಿ ಏಶಿಯನ್ ಇಂಡಿಯನ್ ಎಂದು ಬರೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

“ನೀನು ಅಸಹ್ಯಕರ ನಾಯಿ, ತೀರಾ ಅಸಹ್ಯ, ಇನ್ನೊಮ್ಮೆ ಸಾರ್ವಜನಿಕವಾಗಿ ಹೊರಗೆ ಬರಬೇಡ, ಕೊಳಕ ಹಿಂದೂ, ದನ ತಿನ್ನುವವನೇ” ಎಂದಿತ್ಯಾದಿಯಾಗಿ ಎಂಟು ನಿಮಿಷ ಬಯ್ದಿದ್ದು, ಕೃಷ್ಣನ್ ತುಟಿ ಬಿಚ್ಚದೆ ಎಲ್ಲವನ್ನೂ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಎರಡು ಬಾರಿ ಮುಖಕ್ಕೆ ಉಗಿಯಲು ನೋಡಿದ್ದು ಕೂಡ ದೃಶ್ಯದಲ್ಲಿ ದಾಖಲಾಗಿದೆ.

“ಇದು ಭಾರತ ಅಲ್ಲ, ಭಾರತದಲ್ಲಿ ಆಯಿತು, ಇದು ಅಮೆರಿಕ” ಎಂದು ಕೂಡ ತೇಜಿಂದರ್ ಹೇಳಿದ್ದಾರೆ.

ನಾನು ಹೆದರಿದ್ದೆ, ಬಯ್ದವನೂ ಭಾರತೀಯ ಎಂದು ತಿಳಿದು ಬೇಸರವಾಯಿತು ಎಂದು ಕೃಷ್ಣನ್ ತಿಳಿಸಿದ್ದಾರೆ.

ನಾನು ಜಗಳವಾಡಲು ಇಲ್ಲಿಗೆ ಬಂದಿಲ್ಲ ಎಂದು ಹೇಳಿದ್ದಾಗಿ ಎನ್ ಬಿಸಿ ಬೇ ವರದಿ ಮಾಡಿದೆ.

ಹಿಂದೂಗಳೆಲ್ಲರೂ ಕೊಳಕರೆಂದು ಯಾಕೆ ಹೇಳುತ್ತೀರಿ ಎಂದು ಕೇಳಿದ್ದಾಗಿಯೂ ಕೆಟಿಎಲ್ ಎ ಕಾಮ್ ವರದಿ ಮಾಡಿದೆ.

ಒಬ್ಬ ರೆಸ್ಟೋರೆಂಟ್ ಸಿಬ್ಬಂದಿ ಮತ್ತು ನಾನು ಫ್ರೆಮಾಂಟ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಪೋಲೀಸರು ಮುಖ್ಯಸ್ಥರು ಸಾರ್ವಜನಿಕರಿಗೆ ಹೀಗೆ ಹೇಳಿಕೆ ನೀಡಿದ್ದಾರೆ.

“ನಾವು ದ್ವೇಷದ ಪ್ರಕರಣಗಳನ್ನು ಮತ್ತು ದ್ವೇಷದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅವು ನಮ್ಮ ಸಮುದಾಯದ ಮೇಲೆ ಬೀರುವ ಪರಿಣಾಮವನ್ನು ನಾವು ಅರಿತಿದ್ದೇವೆ. ಇದು ತುಂಬ ತುಚ್ಛವಾದ ಕಾರ್ಯ. ನಾವು ಅವರ ಲಿಂಗ, ಜನಾಂಗ, ರಾಷ್ಟ್ರೀಯತೆ, ಧರ್ಮ ಮತ್ತಿತರ ಭಿನ್ನತೆಗಳನ್ನು ನೋಡದೆ ಎಲ್ಲ ಸಮುದಾಯದ ಸದಸ್ಯರಿಗೂ ರಕ್ಷಣೆ ನೀಡಲು ನಾವು ಇಲ್ಲಿದ್ದೇವೆ.” ಎಂದು ಪೊಲೀಸ್ ಮುಖ್ಯಸ್ಥ ಶಾನ್ ವಾಷಿಂಗ್ಟನ್ ತಿಳಿಸಿದ್ದಾರೆ.

“ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಗೌರವ ನೀಡಬೇಕು. ಅಂಥ ಘಟನೆಗಳು ನಡೆದಾಗ ಅದು ಅಪರಾಧಗಳಿಗೆ ದಾರಿ ಮಾಡುವುದಕ್ಕೆ ಮೊದಲು ಪೋಲೀಸರ ಗಮನಕ್ಕೆ ಬರುವಂತೆ ಮಾಡಿ. ದ್ವೇಷ ಕಾರಣದ ಅಪರಾಧಗಳ ತನಿಖೆಯಲ್ಲಿ ನಾವು ಎಲ್ಲ ಬಗೆಯ ಕಾನೂನು ರೀತ್ಯಾ ಅವಲೋಕನಗಳಲ್ಲಿ ಮುಂದುವರಿಯುತ್ತೇವೆ. ಫ್ರೆಮಾಂಟ್ ನಮ್ಮ ದೇಶದಲ್ಲಿ ಅತಿ ವೈವಿಧ್ಯಮಯ ಸಂಸ್ಕೃತಿಯ ಜನ ಸಮುದಾಯದವರಿರುವ ನಗರ. ವಿಭಿನ್ನ ಜನಾಂಗ ಮತ್ತು ಸಂಸ್ಕೃತಿಯವರು ಈ ನಗರದ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ” ಎಂದು ಕೂಡ ಪೊಲೀಸ್ ಮುಖ್ಯಸ್ಥರ ಹೇಳಿಕೆಯು ಹೊರ ಬಿದ್ದಿದೆ.

ಕಳೆದ ಶುಕ್ರವಾರ ಟೆಕ್ಸಾಸ್ ನಲ್ಲಿ ನಾಲ್ಕು ಮಂದಿ ಭಾರತ ಮೂಲದ ಅಮೆರಿಕವಾಸಿ ಮಹಿಳೆಯರಿಗೆ ಮೆಕ್ಸಿಕನ್ ಅಮೆರಿಕನ್ ಮಹಿಳೆಯೊಬ್ಬರು ಜನಾಂಗೀಯವಾಗಿ ನಿಂದಿಸಿದ್ದರು. “ನೀವು ಅಮೆರಿಕವನ್ನು ಹಾಳು ಮಾಡುತ್ತಿದ್ದೀರಿ, ಭಾರತಕ್ಕೆ ವಾಪಾಸು ಹೋಗಿ” ಎಂದು ಬಯ್ದಿದ್ದಳು.

ಎಸ್ಮೆರಾಲ್ಡಾ ಅಪ್ಟಾನ್ ಎಂಬ ಆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು.



Join Whatsapp