ಚೆಸೇಬಲ್ ಮಾಸ್ಟರ್ಸ್ ಟೂರ್ನಿ: ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ

Prasthutha|

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ, ಮೆಲ್ಟ್‌ವಾಟರ್‌ ಚಾಂಪಿಯನ್ಸ್ ಚೆಸೇಬಲ್ ಮಾಸ್ಟರ್ಸ್ ಟೂರ್ನಿಯ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಬುಧವಾರ ಮುಂಜಾನೆ ನಡೆದ ನಾಲ್ಕು ಗೇಮ್‌ಗಳ ರ‍್ಯಾಪಿಡ್ ಆನ್‌ಲೈನ್ ಸೆಮಿಫೈನಲ್ ಪಂದ್ಯದಲ್ಲಿ ರಷ್ಯನ್-ಡಚ್ ಗ್ರ್ಯಾಂಡ್ ಮಾಸ್ಟರ್ ಜಿಎಂ ಅನೀಶ್ ಗಿರಿ ವಿರುದ್ಧ 3.5- 2.5 ಅಂಕಗಳಿಂದ ಗೆದ್ದ ಪ್ರಜ್ಞಾನಂದ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. 

- Advertisement -

ನಾಲ್ಕು ಸುತ್ತಿನ ಪಂದ್ಯ 2- 2 ಅಂತರದಲ್ಲಿ ಸಮಬಲ ಸಾಧಿಸಿದ ಕಾರಣ, ಟೈಬ್ರೇಕರ್‌ವರೆಗೂ ಮುಂದೂಡಲ್ಪಟ್ಟಿತ್ತು. ಆದರೆ 16 ವರ್ಷದ ಪ್ರಜ್ಞಾನಂದರ ಜಾಣ್ಮೆಯ ನಡೆಯೆದರು, ಅನುಭವಿ ಜಿಎಂ ಅನೀಶ್ ಗಿರಿ ಸೋಲೊಪ್ಪಿಕೊಂಡರು. 

ಟೂರ್ನಿಯ ಅಗ್ರಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಪ್ರಜ್ಞಾನಂದ, ವಿಶ್ವದ ನಂ. 2 ಶ್ರೇಯಾಂಕಿತ ಚೀನಾದ ಡಿಂಗ್ ಲಿರೆನ್ ಸವಾಲನ್ನು ಎದುರಿಸಲಿದ್ದಾರೆ. ಸೆಮಿಫೈನಲ್ ಹಣಾಹಣಿಯಲ್ಲಿ ಚೀನಾದ ಡಿಂಗ್ ಲಿರೆನ್, ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲಸನ್‌ ಎದುರು 2.5- 1.5 ಅಂತರದಲ್ಲಿ ಗೆದ್ದು ಬೀಗಿದ್ದಾರೆ.

- Advertisement -

ಆ ಮೂಲಕ ಮೆಲ್ಟ್‌ವಾಟರ್‌ ಚಾಂಪಿಯನ್ಸ್ ಚೆಸೇಬಲ್ ಮಾಸ್ಟರ್ಸ್ ಟೂರ್ನಿಯ ಫೈನಲ್ ಪ್ರವೇಶಿಸಿದ ಮೊತ್ತ ಮೊದಲ ಭಾರತೀಯ ಚೆಸ್ ಪಟು ಎಂಬ ಕೀರ್ತಿ ಪ್ರಜ್ಞಾನಂದ ತಮ್ಮದಾಗಿಸಿಕೊಂಡಿದ್ದಾರೆ.

ಗೆಲುವಿನ ಬಳಿಕ ಸಂಭ್ರಮಿಸುವ ಬದಲು ಪ್ರಜ್ಞಾನಂದ ನೀಡಿದ ಪ್ರತಿಕ್ರಿಯೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ʻರಾತ್ರಿ ಎರಡು ಗಂಟೆಯಾಗಿದೆ. ನಾಳೆ  (ಬುಧವಾರ) ಬೆಳಗ್ಗೆ 8.45ಕ್ಕೆ ನಾನು ಹತ್ತನೇ ತರಗತಿಯ ಇಂಟರ್ನಲ್ ಪರೀಕ್ಷೆಗೆ ಹಾಜರಾಗಬೇಕಾಗಿದೆ. ಪರೀಕ್ಷಾ ಕೊಠಡಿಯಲ್ಲಿ ನಾನು ಮಲಗದೇ ಇರಲು ಪ್ರಯತ್ನಿಸುತ್ತೇನೆʼ ಎಂದಿದ್ದಾರೆ.   ಅಮೋಘ ಫಾರ್ಮ್‌ನಲ್ಲಿರುವ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ, ಈ ಟೂರ್ನಿಯ ಆರನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲಸನ್  ಅವರನ್ನು ಮಣಿಸಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದರು.



Join Whatsapp