ಚರ್ಚ್ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ | ಭಾರತೀಯ ಕ್ರೈಸ್ತ ಒಕ್ಕೂಟ ಖಂಡನೆ

Prasthutha|

ಉಡುಪಿ: ವ್ಯಾಕ್ಸಿನೇಷನ್ ಹಾಕಬಾರದೆಂದು ಚರ್ಚ್ ಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪವನ್ನು ಕ್ರೈಸ್ತರ ಮೇಲೆ ಹೊರಿಸಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಯವರ ಹೇಳಿಕೆಯನ್ನು ಭಾರತೀಯ ಕ್ರೈಸ್ತ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

- Advertisement -

ಈ ಕುರಿತು ಒಕ್ಕೂಟದ ಅಧ್ಯಕ್ಷ ಪ್ರಶಾಂತ ಜತ್ತನ್ನ ಹೇಳಿಕೆ ನೀಡಿದ್ದು, ತಾವು ಕೊರೋನ ಸಮಯದಲ್ಲಿ ಈ ರೀತಿಯಾಗಿ ಕ್ರೈಸ್ತರ ಮೇಲೆ ಅಲ್ಲಸಲ್ಲದ ಆರೋಪ ಮಾಡುವುದನ್ನು ಬಿಟ್ಟು, ಜನರ ಆರೋಗ್ಯಕ್ಕೆ ಬೇಕಾದ ಕೆಲಸವನ್ನು ಮಾಡಬೇಕು. ಯಾವ ಕ್ರೈಸ್ತ ಚರ್ಚುಗಳು ಕೂಡ ವ್ಯಾಕ್ಸಿನೇಷನ್ ಗೆ ವಿರೋಧವಾಗಿಲ್ಲ. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ರವರು ವ್ಯಾಕ್ಸಿನೇಷನ್ ತೆಗೆದುಕೊಳ್ಳಬೇಕೆಂದು ಬಹಿರಂಗ ಹೇಳಿಕೆಯನ್ನು ಈಗಾಗಲೇ ಕೊಟ್ಟಿರುತ್ತಾರೆ. ಅದೇ ಪ್ರಕಾರ ತಾವೇ ಹೇಳುವ ಪ್ರೊಟೆಸ್ಟೆಂಟ್, ಪೆಂತೆಕಾಸ್ಟ್  ಅವರೆಲ್ಲರೂ ಕೂಡ ಸರಕಾರದ ನಿಯಮಗಳನ್ನು ಪಾಲಿಸಿ ಎಂದು ತಮ್ಮ ತಮ್ಮ ಸಭೆಯಲ್ಲಿ ಬರುವ ಭಕ್ತಾದಿಗಳಿಗೆ ತಿಳಿಸಿರುತ್ತಾರೆ ಎಂದು ಹೇಳಿದ್ದಾರೆ.

ತಾವು ಈ ರೀತಿಯಾಗಿ ಗೊತ್ತಿಲ್ಲದೆ ಕ್ರೈಸ್ತರ ಮೇಲೆ ಅಪವಾದವನ್ನು ಮಾಡಿ ಸೌಹಾರ್ದತೆ ಕೆಡಿಸುವ ಕಾರ್ಯ ಮಾಡಬಾರದಾಗಿ, ತಮ್ಮಲ್ಲಿ ವಿನಂತಿಸುತ್ತೇವೆ. ಜನರ ಪ್ರಾಣ ಹೋಗುವ ಸಮಯದಲ್ಲಿ ಜನರಿಗೆ ಬೇಕಾದ ವ್ಯಾಕ್ಸಿನ್, ಆಕ್ಸಿಜನ್, ಆಸ್ಪತ್ರೆಯಲ್ಲಿ ವಿವಿಧ ವ್ಯವಸ್ಥೆಯ ಕಡೆಗೆ ಗಮನಕೊಟ್ಟು ಜನರಿಗೆ ಸಹಾಯ ಮಾಡಬೇಕೆಂದು ಪ್ರಶಾಂತ್ ಜತ್ತನ್ನ ಸಂಸದೆಯನ್ನು ಆಗ್ರಹಿಸಿದ್ದಾರೆ.

Join Whatsapp