ವಾಷಿಂಗ್ಟನ್ : ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ತಂಡಕ್ಕೆ ಮತ್ತೋರ್ವ ಭಾರತೀಯ ಆಯ್ಕೆಯಾಗಿದ್ದಾರೆ. ಬೈಡನ್ ಘೋಷಿಸಿರುವ ಶ್ವೇತ ಭವನದ ಸಂವಹನ ಮತ್ತು ಮಾಧ್ಯಮ ವಿಭಾಗದ ಹೆಚ್ಚುವರಿ ಸದಸ್ಯರ ಪಟ್ಟಿಯಲ್ಲಿ ಸಹಾಯಕ ಮಾಧ್ಯಮ ಕಾರ್ಯದರ್ಶಿಯಾಗಿ ಭಾರತ ಮೂಲದ ವೇದಾಂತ್ ಪಟೇಲ್ ನೇಮಕಗೊಂಡಿದ್ದಾರೆ.
ವೇದಾಂತ್ ಪಟೇಲ್ ಪ್ರಸ್ತುತ ಬೈಡನ್ ಪ್ರಚಾರದಲ್ಲಿ ಹಿರಿಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಪ್ರಾದೇಶಿಕ ಸಂವಹನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಭಾರತದಲ್ಲಿ ಜನಿಸಿದ ಪಟೇಲ್, ಕ್ಯಾಲಿಫೋರ್ನಿಯಾದಲ್ಲಿ ಬೆಳೆದಿದ್ದಾರೆ.
ಕ್ಯಾಲಿಫೋರ್ನಿಯಾ-ರಿವರ್ ಸೈಡ್ ವಿವಿ ಮತ್ತು ಫ್ಲೋರಿಡಾ ವಿವಿಯಲ್ಲಿ ಪಟೇಲ್ ಪದವಿ ಪಡೆದಿದ್ದಾರೆ. ಬೈಡನ್ ಆಯ್ಕೆ ಮಾಡಿರುವ ಶ್ವೇತಭವನದ ಸಂವಹನ ಮತ್ತು ಮಾಧ್ಯಮ ವಿಭಾಗದ 16 ಮಂದಿಯಲ್ಲಿ ಪಟೇಲ್ ಕೂಡ ಒಬ್ಬರಾಗಿದ್ದಾರೆ.