ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 100ಕ್ಕೂ ಹೆಚ್ಚು ಮುಸ್ಲಿಂ ನಾಯಕರನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಮಧ್ಯರಾತ್ರಿ ದಾಳಿ ನಡೆಸಿ ಬಂಧಿಸಿರುವುದನ್ನು ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ (ಐಎಎಂಸಿ) ಬಲವಾಗಿ ಖಂಡಿಸುತ್ತದೆ ಎಂದು ಐಎಎಂಸಿ ಕಾರ್ಯನಿರ್ವಾಹಕ ನಿರ್ದೇಶಕ ರಶೀದ್ ಅಹ್ಮದ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಇದು ಭಾರತದ ಮುಸ್ಲಿಂ ನಾಯಕತ್ವದ ಮೇಲೆ ಭಾರಿ ದಬ್ಬಾಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಈ ಬಂಧನಗಳನ್ನು ಮಾಡಿದೆ. ಇವೆರಡೂ ಪ್ರಧಾನ ಮಂತ್ರಿಗಳಿಂದ ಫೆಡರಲ್ ಆಗಿ ನಿಯಂತ್ರಿಸಲ್ಪಡುತ್ತವೆ ಎಂದು ಆರೋಪಿಸಿದರು.
ಪಿಎಫ್ಐ ಮಾಜಿ ಮುಖ್ಯಸ್ಥ ಮತ್ತು ಎಸ್ ಡಿಪಿಐನ ಸ್ಥಾಪಕ ಅಧ್ಯಕ್ಷ ಎರಪ್ಪುಂಗಲ್ ಅಬೂಬಕ್ಕರ್ ಮತ್ತು ಹಿರಿಯ ಪತ್ರಕರ್ತ ಮತ್ತು ನ್ಯಾಷನಲ್ ಕಾನ್ಫೆಡರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ಸ್ (ಎನ್ ಸಿಎಚ್ಆರ್ ಒ) ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ಪಿ ಕೋಯಾ ಅವರಂತಹ ಪ್ರಮುಖ ಮುಸ್ಲಿಂ ಬುದ್ಧಿಜೀವಿಗಳನ್ನು ಫೆಡರಲ್ ಏಜೆನ್ಸಿಗಳು ಬಂಧಿಸಿವೆ ಎಂದು ಅವರು ಹೇಳಿದ್ದಾರೆ.
ಕೆಲವು ಮುಸ್ಲಿಂ ನಾಯಕರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ, ಇದು ಬಿಜೆಪಿ ಸರ್ಕಾರವು ಮುಸ್ಲಿಮರನ್ನು ಗುರಿಯಾಗಿಸಲು ವ್ಯಾಪಕವಾಗಿ ಬಳಸಿರುವ ಕರಾಳ ಭಯೋತ್ಪಾದಕ ಕಾನೂನಾಗಿದೆ ಎಂದು ಅವರು ಟೀಕಿಸಿದರು.
ಮುಸ್ಲಿಮರ ನರಮೇಧಕ್ಕೆ ಪದೇ ಪದೇ ಕರೆಗಳನ್ನು ನೀಡುತ್ತಿರುವ ಹಿಂದೂ ತೀವ್ರಗಾಮಿ ಸಂಘಟನೆಗಳು, ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರವನ್ನು ಸಂಘಟಿಸುತ್ತಿವೆ. ಆದರೆ ಇವುಗಳ ವಿರುದ್ಧ ಯಾವುದೇ ಕ್ರಮ ಇಲ್ಲ. ಆದರೆ ಸಂವಿಧಾನದ ವ್ಯಾಪ್ತಿಯಲ್ಲಿ ತಮ್ಮ ಹಕ್ಕುಗಳನ್ನು ರಕ್ಷಿಸಲು ಕೆಲಸ ಮಾಡುವ ಮುಸ್ಲಿಂ ಸಂಘಟನೆಗಳು ಭಯೋತ್ಪಾದಕ ಆರೋಪಗಳನ್ನು ಎದುರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಸ್ಲಿಂ ನಾಯಕರನ್ನು ಬಂಧಿಸುವುದು ಸಂಪೂರ್ಣ ಅನ್ಯಾಯವಾಗಿದೆ. ಇದು ಭಾರತವು ಅತ್ಯಂತ ಅಪಾಯಕಾರಿ ಹಾದಿಯಲ್ಲಿದೆ ಎಂಬ ಅಂಶವನ್ನು ಸೂಚಿಸುತ್ತದೆ. ಇಂದು ಭಾರತದಲ್ಲಿ ಯಾವುದೇ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ರಶೀದ್ ಅಹ್ಮದ್ ವಿಷಾದ ವ್ಯಕ್ತಪಡಿಸಿದ್ದಾರೆ