ಬೆಂಗಳೂರು : ಉಜ್ವಲ್ ಹಿಂದೂಸ್ತಾನ್ ನಮಗೆ ಬೇಕಿದೆ. ಜನರು ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಕುಟುಕಿದ್ದಾರೆ.
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಇಂದು ಭೇಟಿ ನೀಡಿದ ಕೆಸಿ ಆರ್, ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಗೌಡರ ಜೊತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಯುವ ಶಕ್ತಿ ಇದ್ದರೂ, ದೇಶದಲ್ಲಿ ಹಲವು ಸಂಪನ್ಮೂಲಗಳಿದ್ದರೂ ಇವತ್ತಿಗೂ ಹಲವು ಸಮಸ್ಯೆ ಬಗ್ಗೆ ಚರ್ಚೆಯಾಗಿಲ್ಲ. ದೇಶದಲ್ಲಿ ರೈತರು, ದಲಿತರು, ಆದಿವಾಸಿಗಳು ಕಷ್ಟದಲ್ಲಿ ಇದ್ದಾರೆ. ಭರವಸೆಗಳನ್ನು ಸಾಕಷ್ಟು ಕೊಡಬಹುದು. ಆದರೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ. ಯುವಕರಿಗೆ ಉದ್ಯೋಗ ಕೊಟ್ರಾ?. ದೇಶದಲ್ಲಿ ಎಲ್ಲವೂ ಸಮಸ್ಯೆಗಳೇ ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಅತೀ ಶೀಘ್ರದಲ್ಲೇ ಬದಲಾವಣೆಯಾಗಲಿದೆ. ಎರಡು, ಮೂರು ತಿಂಗಳು ಕಾಯಿರಿ ಎಂದು ಹೇಳಿದರು.
ಕರ್ನಾಟಕದ ರಾಜಕೀಯ ಕೂಡ ಗೊತ್ತಿದೆ. ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಬರುತ್ತಿದೆ. ಕುಮಾರಸ್ಚಾಮಿ ಸಿಎಂ ಆಗಿದ್ದವರು. ಭಾರತ ಬದಲಿಸುವ ಕೆಲಸ ಆಗಲಿದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ಮ ನಡೆಸುತ್ತಿದ್ದೇವೆ ಎಂದರು.
ದೇಶದ ಸರ್ಕಾರ, ಸಮಸ್ಯೆಗಳ ಬಗ್ಗೆ ದೇವೇಗೌಡರ ಜೊತೆ ಸುದೀರ್ಘ ಚರ್ಚೆ ಮಾಡಿದ್ದೇವೆ. ದೇಶದಲ್ಲಿ ಬದಲಾವಣೆ ತರಬೇಕಿದೆ ಎಂದು ಹೇಳಿದರು.