ಮತ್ತಷ್ಟು ಅಸಮಾನತೆಯತ್ತ ಭಾರತ

Prasthutha|

ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ದಿನೇ ದಿನೇ ಕುಸಿಯುತ್ತಿದೆ. ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ, ಭಾರತದ ಸಾಧನೆ ಕನಿಷ್ಠ ಮಟ್ಟಕ್ಕೆ ಇಳಿದಿರುವಾಗಲೇ ಇದೀಗ ಮತ್ತೊಂದು ಜಾಗತಿಕ ವರದಿ ಹೊರಬಿದ್ದಿದೆ. ವಿಶ್ವ ಅಸಮಾನತೆಯ ವರದಿಯಲ್ಲಿ ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಭಾರೀ ಅಂತರ ಇರುವುದು ಈ ವರದಿಯಲ್ಲಿ ದೃಢಪಟ್ಟಿದೆ. ಭಾರತ ವಿಶ್ವದ ಅತ್ಯಂತ ಅಸಮಾನ ದೇಶಗಳಲ್ಲಿ ಒಂದಾಗಿದೆ ಎಂದು ಫ್ರಾನ್ಸ್ ಮೂಲದ ವಿಶ್ವ ಅಸಮಾನತೆಯ ಪ್ರಯೋಗಾಲಯದ ವರದಿ ಹೇಳಿದೆ. ದೇಶದ ಒಂದು ಶೇಕಡಾ ಜನರು ದೇಶದ ಒಟ್ಟು ಸಂಪತ್ತಿನ ಐದನೇ ಒಂದು ಭಾಗವನ್ನು ತಮ್ಮಲ್ಲಿ ಇಟ್ಟುಕೊಂಡಿದ್ದಾರೆ. ಭಾರತವು ಅಭಿವೃದ್ಧಿ ಹೊಂದುತ್ತಿರುವ ಗಣ್ಯರನ್ನು ಹೊಂದಿರುವ ಬಡ ಮತ್ತು ಅತ್ಯಂತ ಅಸಮಾನ ದೇಶವಾಗಿ ರೂಪುಗೊಂಡಿದೆ ಎಂದು ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ನೇತೃತ್ವದ ತಜ್ಞರು ತಯಾರಿಸಿದ ಈ ವರದಿಯಲ್ಲಿ ತಿಳಿಸಲಾಗಿದೆ.

- Advertisement -

ಸಂಘಪರಿವಾರದಿಂದ ನಿಯಂತ್ರಿಸಲ್ಪಡುವ ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಈ ತಾರತಮ್ಯ ಹೆಚ್ಚಾಗಿದೆ ಎಂಬುದಕ್ಕೆ ಯಾವುದೇ ದೊಡ್ಡ ಅಧ್ಯಯನದ ಆವಶ್ಯಕತೆ ಇಲ್ಲ. ಪೂರ್ವ ತಯಾರಿ ಇಲ್ಲದೆ ಘೋಷಿಸಿದ ಗರಿಷ್ಠ ನೋಟುಗಳ ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ ಟಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮಾರಾಟ ಮತ್ತು ಖಾಸಗೀಕರಣ ಮುಂತಾದವು ಬಡವರನ್ನು ಇನ್ನಷ್ಟು ಬಡವರನ್ನಾಗಿಸಿದೆ. ಸಂಘಪರಿವಾರದ ಹಿತಾಕಾಂಕ್ಷಿಗಳಿಗೆ ಅಕ್ರಮ ಉದ್ಯಮ ನಡೆಸಲು ಅವಕಾಶ ಕಲ್ಪಿಸುವ ಪ್ರವೃತ್ತಿ ಎಲ್ಲೆಡೆ ಕಂಡುಬರುತ್ತಿದೆ. ಕಳ್ಳೋದ್ಯಮಕ್ಕೆ ಕಡಿವಾಣ ಹಾಕಬೇಕಾದ ಪ್ರಾಧಿಕಾರಗಳು ಮೌನಕ್ಕೆ ಶರಣಾಗಿ ಅಕ್ರಮಕ್ಕೆ ಸಹಭಾಗಿತ್ವ ನೀಡುತ್ತಿವೆ.

ಸಂಪತ್ತು ಕೇಂದ್ರೀಕರಣಗೊಳ್ಳಬಾರದು ಎಂಬುದು ಉತ್ತಮ ಆರ್ಥಿಕತೆಯ ಲಕ್ಷಣ.ಆದರೆ ಇತ್ತೀಚಿನ ವರ್ಷಗಳಲ್ಲಿ ಕುಬೇರರ ಕೈಯಲ್ಲಿ ಸಂಪತ್ತು ಕೇಂದ್ರೀಕರಣಗೊಳ್ಳುತ್ತಿದ್ದು, ಇದು ಒಟ್ಟು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಅದರಲ್ಲೂ ಫ್ಯಾಶಿಸ್ಟ್ ಮನಸ್ಥಿತಿಯ ಸರ್ಕಾರವೊಂದು ಅಧಿಕಾರದಲ್ಲಿರುವ ದೇಶದಲ್ಲಿ ಕೆಲವೇ ಕೆಲವು ಮಂದಿಯಲ್ಲಿ ಸಂಪತ್ತು ಕೇಂದ್ರೀಕರಣಗೊಳ್ಳುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇಂತಹ ಕುಬೇರರನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡು ಸರ್ಕಾರ ಇಡೀ ಆರ್ಥಿಕತೆಯನ್ನು ಹಾಳುಗೆಡವಿ ಇಡೀ ನಾಗರಿಕ ಸಮಾಜವನ್ನು ಶೋಷಣೆಗೆ ಒಳಪಡಿಸುವ ಸಾಧ್ಯತೆ ಇರುತ್ತದೆ. ನಾಗರಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಸರ್ಕಾರ ತನ್ನ ಗುಪ್ತ ಕಾರ್ಯಸೂಚಿಯನ್ನು ಒಂದೊಂದಾಗಿ ಜಾರಿಗೆ ತರಲು ಮುಂದಾಗುತ್ತಿರುವುದು ಸಾಬೀತಾಗಿದೆ. ದೇಶದ ಬೃಹತ್ ಉದ್ಯಮಗಳಿಗೆ ಬಡ ರೈತರ ಜಮೀನನ್ನು ಉಚಿತವಾಗಿ ನೀಡುವುದು, ಶ್ರೀಮಂತ ಉದ್ಯಮಗಳಿಗೆ ಬೃಹತ್ ಪ್ರಮಾಣದ ತೆರಿಗೆ ವಿನಾಯಿತಿ ನೀಡುವುದು ಈಗ ಸಾಮಾನ್ಯವಾಗಿದೆ. ಇಂತಹ ಉದ್ಯಮಗಳು ಸರ್ಕಾರದ ಪರವಾಗಿ ನಿಲ್ಲುವವರೆಗೆ ಅವರಿಗೆ ಶ್ರೀರಕ್ಷೆ ಇರುತ್ತದೆ. ಯಾವಾಗ ಈ ಉದ್ಯಮಿಗಳು ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಾರೋ ಆಗ ಅವರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಪ್ರವೃತ್ತಿ ನಡೆಯುತ್ತಿದೆ. ಸರ್ಕಾರದಿಂದ ಅನುಕೂಲ ಪಡೆದ ಕುಬೇರರು ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ಇಂತಿಷ್ಟು ದೇಣಿಗೆ ನೀಡಿ ಫ್ಯಾಶಿಸ್ಟ್ ಶಕ್ತಿ ಬೆಳೆಯಲು ಪರೋಕ್ಷ ಕಾರಣರಾಗುತ್ತಿದ್ದಾರೆ. ದೇಶದ ಬಹುಪಾಲು ಜನರು ಸಂಕಷ್ಟದಲ್ಲಿರಬೇಕು ಎಂಬುದೇ ಸಂಘಪರಿವಾರದ ಆರ್ಥಿಕ ನೀತಿಯಾಗಿದೆ.  ಪ್ರಜೆ ತನ್ನ ದೈನಂದಿನ ಜೀವನ ನಿರ್ವಹಣೆಯ ಬಗ್ಗೆಯೇ ಚಿಂತೆಯಲ್ಲಿರಬೇಕು. ಆತ ಮತ್ಯಾವುದರ ಬಗ್ಗೆಯೂ ಚರ್ಚಿಸಬಾರದು ಎಂಬಂತಹ ವಾತಾವರಣವನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಗುತ್ತಿದೆ. ಮೋದಿ ಸರಕಾರ ಜಾರಿಗೆ ತಂದು, ಸುದೀರ್ಘ ಪ್ರತಿಭಟನೆಯ ಬಳಿಕ ವಾಪಸ್ ಪಡೆದ ಕೃಷಿ ಕಾಯ್ದೆಗಳು ಕೂಡ ಅತಿ ಶ್ರೀಮಂತರಿಗೆ ಕೃಷಿ ವಲಯವನ್ನು ಮೇಯಲು ಅವಕಾಶ ಕೊಡುವ ಉದ್ದೇಶ ಹೊಂದಿದ್ದವು. ಮುಖೇಶ್ ಅಂಬಾನಿ ಏಷ್ಯಾದಲ್ಲಿಯೇ ಶ್ರೀಮಂತರಾಗಿ ಬಡ್ತಿ ಪಡೆದುದ್ದರ ಹಿಂದೆ ಬಿಜೆಪಿ ಸರಕಾರದ ಪಾಲು ಇದೆ. 2020ರ ಒಂದೇ ವರ್ಷದಲ್ಲಿ ಅವರ ಆಸ್ತಿ 22 ಬಿಲಿಯನ್ ಡಾಲರ್ ಏರಿಕೆಯಾಗಿತ್ತು. ಆರ್ಥಿಕ ಅಸಮಾನತೆ ಪ್ರಮಾಣವನ್ನು ಕಡಿಮೆ ಮಾಡಲು ಸುಧಾರಿತ ತೆರಿಗೆ ಪದ್ಧತಿಯನ್ನು ಜಾರಿಗೆ ತರಬೇಕು. ಮಧ್ಯಮ ಮತ್ತು ಬಡ ವರ್ಗಗಳಿಗೆ ಶಿಕ್ಷಣ, ಆರೋಗ್ಯ, ವಸತಿಯನ್ನು ಉಚಿತವಾಗಿ ನೀಡುವ ಮೂಲಕ ಅವರನ್ನು ಬಡತನದಿಂದ ಮೇಲೆತ್ತಲು ಸಾಧ್ಯವಾಗಬಹುದು. ಆದರೆ ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ಕೆಲಸ ಮಾಡುವ ಪ್ರಸ್ತುತ ಕೇಂದ್ರ ಸರ್ಕಾರದಿಂದ ಇದು ನಿರೀಕ್ಷಿಸಲು ಸಾಧ್ಯವೇ ?

Join Whatsapp