ನವದೆಹಲಿ: ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಕಂತಿನ ಮೇಲೆ ವಿಧಿಸಿರುವ ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಇಂದು (ಮಂಗಳವಾರ) ರಾಷ್ಟ್ರ ರಾಜಧಾನಿ ದೆಹಲಿಯ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದವು.
‘ತೆರಿಗೆ ಭಯೋತ್ಪಾದನೆ’ ಎಂಬ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಕಂತಿನ ಮೇಲಿನ ತೆರಿಗೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಇಂದು ಸಂಸತ್ ಆವರಣದಲ್ಲಿ ‘ಇಂಡಿಯಾ’ ಪಕ್ಷಗಳು ಪ್ರತಿಭಟನೆ ನಡೆಸುವ ಮೂಲಕ ಜೀವ ವಿಮೆ ಹಾಗೂ ಆರೋಗ್ಯ ವಿಮೆಗಳ ಕಂತುಗಳ ಮೇಲಿನ ಶೇ 18ರಷ್ಟು ಜಿಎಸ್ಟಿಯನ್ನು ತಕ್ಷಣವೇ ತೆಗೆದುಹಾಕುವಂತೆ ಒತ್ತಾಯಿಸಿದವು. ಈ ಸುಲಿಗೆಯು ನಮ್ಮ ಜನರಿಗೆ ವಿಶೇಷವಾಗಿ ಮಧ್ಯಮ ವರ್ಗದವರಿಗೆ ತೀವ್ರ ಹೊಡೆತವಾಗಿದೆ. ಮೋದಿ ಸರ್ಕಾರದ ತೆರಿಗೆ ವಸೂಲಾತಿ ನೀತಿಗಳ ಹೊರೆಯಿಂದ ಮಧ್ಯಮ ವರ್ಗದವರು ಈಗಾಗಲೇ ಸಂಕಷ್ಟದಲ್ಲಿದ್ದಾರೆ’ ಎಂದು ಅವರು ಹೇಳಿದ್ದಾರೆ.