ಐಸಿಸಿ T-20 ವಿಶ್ವಕಪ್: ಅಳಿವು ಉಳಿವಿನ ಪಂದ್ಯದಲ್ಲಿ ಟೀಮ್ ಇಂಡಿಯಾ-ಕಿವೀಸ್ ಮುಖಾಮುಖಿ

Prasthutha|

ದುಬೈ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾನುವಾರ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಟೂರ್ನಿಯಲ್ಲಿ ಆಡಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿರುವ ಉಭಯ ತಂಡಗಳಿಗೆ ಇಂದಿನ ಪಂದ್ಯ ಅಳಿವು ಉಳಿವಿನ ಪಂದ್ಯವಾಗಲಿದೆ.

- Advertisement -


ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಎರಡು ತಂಡಗಳು ಸೆಮಿಫೈನಲ್ ಹಂತಕ್ಕೆ ತೇರ್ಗಡೆಯಾಗಲಿವೆ. ಗ್ರೂಪ್-2ರಲ್ಲಿ ಈಗಾಗಲೇ ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದು, ಉಳಿದ ಎರಡು ಪಂದ್ಯಗಳಲ್ಲಿ ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳನ್ನು ಎದುರಿಸಲಿದೆ. ಹೀಗಾಗಿ ಪಾಕಿಸ್ತಾನ ತಂಡದ ಸೆಮಿಫೈನಲ್ ಎಂಟ್ರಿ ಬಹುತೇಕ ಖಚಿತವಾಗಿದೆ. ಉಳಿದಿರುವ ಒಂದು ಸ್ಥಾನಕ್ಕಾಗಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಭಾನುವಾರದ ಪಂದ್ಯ ಎರಡೂ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ.


ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ. ಟಾಸ್ ಗೆಲ್ಲುವ ತಂಡ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಡುವುದು ನಿಶ್ಚಿತ. ಎರಡನೇ ಇನ್ನಿಂಗ್ಸ್ ವೇಳೆ ಇಬ್ಬನಿ ಬೀಳುವ ಕಾರಣ ಬೌಲರ್’ಗಳಿಗೆ ಸಮಸ್ಯೆ ಎದುರಾಗಲಿದ್ದು, ಬ್ಯಾಟರ್’ಗಳಿಗೆ ಅನುಕೂಲವಾಗಲಿದೆ.

- Advertisement -


ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ
ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಹೀನಾಯವಾಗಿ ಸೋಲನುಭವಿಸಿತ್ತು. ಪಾಕಿಸ್ತಾನದ ಒಂದೇ ಒಂದು ವಿಕೆಟ್ ಪಡೆಯಲು ಭಾರತದ ಬೌಲರ್’ಗಳಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದೆರಡು ಬದಲಾವಣೆಗಳೊಂದಿಗೆ ಮೈದಾನಕ್ಕೆ ಇಳಿಯುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಆಡಿದ್ದ ವರುಣ್ ಚಕ್ರವರ್ತಿ ಬದಲಿಗೆ ಅನುಭವಿ ಸ್ಪಿನ್ನರ್ ಆರ್.ಆಶ್ವಿನ್, ಹಾಗೂ ಹಾರ್ದಿಕ್ ಪಾಂಡ್ಯಾ ಅಥವಾ ಭುವನೇಶ್ವರ್ ಕುಮಾರ್ ಬದಲಿಗೆ ಶಾರ್ದೂಲ್ ಠಾಕೂರ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.


ಕಿವೀಸ್ ವಿರುದ್ಧ “ಕೆಟ್ಟ ಇತಿಹಾಸ’’
ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಕಿವೀಸ್ ವಿರುದ್ಧ ಕಳಪೆ ದಾಖಲೆ ಹೊಂದಿದೆ. 2003ರ ಬಳಿಕ ನ್ಯೂಜಿಲೆಂಡ್ ವಿರುದ್ಧ ಭಾರತ ಐಸಿಸಿ ಟೂರ್ನಿಗಳಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಸೋಲನುಭವಿಸಿದೆ. 2007, 2016ರ ಟಿ-20 ವಿಶ್ವಕಪ್, 2019ರ ಏಕದಿನ ವಿಶ್ವಕಪ್, ಹಾಗೂ ಕೊನೇಯದಾಗಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲೂ ಭಾರತ ಕಿವೀಸ್ ತಂಡಕ್ಕೆ ಶರಣಾಗಿತ್ತು.



Join Whatsapp