ನವದೆಹಲಿ: ಭಾರತವನ್ನು ಬಿಕ್ಕಟ್ಟು ಪೀಡಿತ ಶ್ರೀಲಂಕಾ ದೇಶಕ್ಕೆ ಹೋಲಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಭಾರತದ ನಿರುದ್ಯೋಗ, ಇಂಧನ ಬೆಲೆ ಮತ್ತು ಕೋಮು ಹಿಂಸಾಚಾರ ವಿಚಾರದಲ್ಲಿ ಉಭಯ ದೇಶಗಳ ಗ್ರಾಫ್ ಗಳಲ್ಲಿ ಸಾಮ್ಯತೆಯಿದೆ ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಭಾರತದ ಆರ್ಥಿಕ ವ್ಯವಸ್ಥೆಯನ್ನು ಟ್ವೀಟ್ ಮೂಲಕ ಟೀಕಿಸಿದ ಅವರು, ಜನರನ್ನು ತಬ್ಬಿಬ್ಬುಗೊಳಿಸುವುದರಿಂದ ಸತ್ಯ ಎಂದೂ ಬದಲಾಗುವುದಿಲ್ಲ. ಭಾರತವು ಶ್ರೀಲಂಕಾದಂತೆ ಗೋಚರಿಸುತ್ತಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಆರು ಅಂಶಗಳ ಗ್ರಾಫ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಎರಡೂ ದೇಶಗಳಲ್ಲಿ 2017 ರಿಂದ ನಿರುದ್ಯೋಗ ಹೆಚ್ಚುತ್ತಿದೆ ಎಂದು ಗ್ರಾಫ್ ತೋರಿಸಿದೆ. 2020 ರಲ್ಲಿ ಭಾರತ ಕರೋನ ವೈರಸ್ ವಿರುದ್ಧ ಹೋರಾಡಲು ಲಾಕ್ ಡೌನ್ ಹೇರಿದ ಹಿನ್ನೆಲೆಯಲ್ಲಿ ಆ ವರ್ಷ ಮತ್ತು ಮುಂದಿನ ವರ್ಷ ಇದು ಇನ್ನಷ್ಟು ಇಳಿಕೆ ಕಂಡಿದೆ.
ಎರಡನೇ ಗ್ರಾಫ್ ನಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆಗಳನ್ನು ಹೋಲಿಕೆ ಮಾಡಲಾಗಿದೆ. 2017 ರಿಂದ ಏರಿಕೆಯಾಗುತ್ತಿದೆ ಮತ್ತು 2021 ರ ಸುಮಾರಿಗೆ ಅದು ಗಗನಕ್ಕೇರಿದೆ.
ಮೂರನೇ ಸೆಟ್ ಗ್ರಾಫ್‌ಗಳು 2020-21ರಲ್ಲಿ ಎರಡೂ ದೇಶಗಳಲ್ಲಿ ಕೋಮು ಹಿಂಸಾಚಾರ ತೀವ್ರವಾಗಿ ಏರುತ್ತಿರುವುದನ್ನು ತೋರಿಸಿದೆ.
ಶ್ರೀಲಂಕಾವು ತೀವ್ರವಾದ ಆಹಾರ ಮತ್ತು ವಿದ್ಯುತ್ ಕೊರತೆಯಿಂದಾಗಿ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ ಮತ್ತು ಕೋವಿಡ್ ಸಂದರ್ಭದಲ್ಲಿ ಪ್ರವಾಸೋದ್ಯಮದ ಮೇಲಿನ ನಿರ್ಬಂಧದಿಂದ ಉಂಟಾದ ವಿದೇಶಿ ವಿನಿಮಯ ಕೊರತೆಯಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.