ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Prasthutha|

ಢಾಕಾ: ಉಪನಾಯಕ ಹರ್ಮನ್‌’ಪ್ರೀತ್ ಸಿಂಗ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 3–1 ಅಂತರದಲ್ಲಿ ಬಗ್ಗುಬಡಿದ ಭಾರತ, ಏಷ್ಯನ್ ಹಾಕಿ ಚಾಂಪಿಯನ್ಸ್ ಟೂರ್ನಿಯ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ರೌಂಡ್ ರಾಬಿನ್ ಹಂತದಲ್ಲಿ 2 ಗೆಲುವು ಹಾಗೂ 1 ಪಂದ್ಯದಲ್ಲಿ ಡ್ರಾ ಸಾಧಿಸಿರುವ ಭಾರತ 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

- Advertisement -

ಟೋಕಿಯೊ ಒಲಿಂಪಿಕ್ಸ್’ನಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ಮಾಡಿದ್ದ ಭಾರತ, ಭಾನುವಾರ ನಡೆಯುವ ಪಂದ್ಯದಲ್ಲಿ ಜಪಾನ್ ತಂಡದ ಸವಾಲನ್ನು ಎದುರಿಸಲಿದೆ.

ಢಾಕಾದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ 8ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಹರ್ಮನ್‌’ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿದರು. ಮೊದಲ ಕ್ವಾರ್ಟರ್‌’ನಲ್ಲಿ ಭಾರತ ತಂಡ 1-0 ಗೋಲುಗಳ ಮುನ್ನಡೆ ಸಾಧಿಸಿತ್ತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ 2ನೇ ಕ್ವಾರ್ಟರ್‌’ನಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ವಿಫಲವಾದವು. 3ನೇ ಕ್ವಾರ್ಟರ್‌ನಲ್ಲಿ ಆಕಾಶ್‌’ದೀಪ್ ಸಿಂಗ್ ಫೀಲ್ಡ್ ಗೋಲಿನ ಮೂಲಕ ಭಾರತದ ಮುನ್ನಡೆಯನ್ನು 2-0ಗೆ ಏರಿಸಿದರು. 4ನೇ ಹಾಗೂ ಅಂತಿಮ ಕ್ವಾರ್ಟರ್‌’ನ 53ನೇ ನಿಮಿಷದಲ್ಲಿ ಹರ್ಮನ್‌’ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ ಗೋಲಿನ ನೆರವಿನಿಂದ ಭಾರತ ಅಂತಿಮವಾಗಿ 3-1 ಅಂತರದಲ್ಲಿ ಗೆಲುವಿನ ನಗೆ ಬೀರಿತು. ಪಾಕ್ ಪರ ಏಕೈಕ ಗೋಲು 45ನೇ ನಿಮಿಷದಲ್ಲಿ ಜುನೈದ್ ಮಂಜೂರ್ ಮೂಲಕ ದಾಖಲಾಯಿತು.

- Advertisement -

ಟೂರ್ನಿಯ ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾ ತಂಡವನ್ನು 9-0 ಗೋಲುಗಳ ಭಾರಿ ಅಂತರದಲ್ಲಿ ಮಣಿಸಿತ್ತು. ಮತ್ತೊಂದೆಡೆ ಪಾಕಿಸ್ತಾನ ತಂಡವು ತನ್ನ ಮೊದಲ ಪಂದ್ಯದಲ್ಲಿ ಜಪಾನ್ ಎದುರು ಡ್ರಾ ಮಾಡಿಕೊಂಡಿತ್ತು.  ಕಳೆದ ಬಾರಿ ಮಸ್ಕತ್‌’ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಶಸ್ತಿ ಹಂಚಿಕೊಂಡಿದ್ದವು.



Join Whatsapp