ವಿಶ್ವಸಂಸ್ಥೆ: ಗಾಝಾದಲ್ಲಿ ತಕ್ಷಣ ಮತ್ತು ಸಂಪೂರ್ಣ ಕದನ ವಿರಾಮ ಘೋಷಣೆಯಾಗಬೇಕು ಎಂದು ಭಾರತ ತನ್ನ ಕರೆಯನ್ನು ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದೆ. ಹಮಾಸ್ ವಶದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕೆಂದೂ ಭಾರತ ಕರೆ ನೀಡಿದೆ.
ವಿಶ್ವಸಂಸ್ಥೆಗೆ ಭಾರತದ ಉಪ ಪ್ರತಿನಿಧಿ ಆರ್. ರವೀಂದ್ರ ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಧ್ಯಪ್ರಾಚ್ಯ ಕುರಿತು ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವು ಗಾಝಾ ಪಟ್ಟಿಯಲ್ಲಿ ತಕ್ಷಣದ ಮತ್ತು ಸಂಪೂರ್ಣ ಕದನ ವಿರಾಮ, ಸಕಾಲಿಕ ಮಾನವೀಯ ನೆರವು, ಹಾಗೂ ಪರಿಹಾರ ಲಭ್ಯತೆಗೆ ನಮ್ಮ ಕರೆಯನ್ನು ಪುನರುಚ್ಚರಿಸುತ್ತೇವೆ. ಎಲ್ಲ ಒತ್ತೆಯಾಳುಗಳ ತಕ್ಷಣ ಮತ್ತು ಬೇಷರತ್ ಬಿಡುಗಡೆಗೂ ನಾವು ಕರೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
2023 ಅ.7ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದೂ ಅವರು ಹೇಳಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ನಾಗರಿಕರ ಜೀವಹಾನಿಯನ್ನೂ ನಾವು ಖಂಡಿಸಿದ್ದೇವೆ. ಸಂಘರ್ಷವನ್ನು ತಿಳಿಗೊಳಿಸುವಂತೆ ನಾವು ಕರೆ ನೀಡಿದ್ದೇವೆ. ಮಾತುಕತೆ ಹಾಗೂ ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕೆ ನಾವು ಒತ್ತು ನೀಡಿದ್ದೇವೆ ಎಂದು ಆರ್. ರವೀಂದ್ರ ಹೇಳಿದರು.
ಎಲ್ಲ ಸಂದರ್ಭಗಳಲ್ಲಿಯೂ ಅಂತಾರಾಷ್ಟ್ರೀಯ ಮತ್ತು ಮಾನವೀಯ ಕಾನೂನುಗಳ ಪಾಲನೆಗೂ ಅವರು ಒತ್ತಾಯಿಸಿದರು.