ಸ್ಯಾಫ್ ಫುಟ್ಬಾಲ್ ಟೂರ್ನಿ – 8ನೇ ಬಾರಿಗೆ ಭಾರತ ಚಾಂಪಿಯನ್

Prasthutha|

ಮಾಲೆ, ಮಾಲ್ಡೀವ್ಸ್ ; ಸುನಿಲ್ ಛೆಟ್ರಿ ನಾಯಕತ್ವದ ಭಾರತದ ಫುಟ್ಬಾಲ್ ತಂಡ ದಾಖಲೆಯ 8ನೇ ಬಾರಿಗೆ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ – ಸ್ಯಾಫ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ಶನಿವಾರ ತಡರಾತ್ರಿ ಮಳೆಯ ನಡುವೆ ಆರಂಭವಾದ ಫೈನಲ್ ಪಂದ್ಯದಲ್ಲಿ ಭಾರತ, ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ನೇಪಾಳ ತಂಡವನ್ನು 3-0 ಅಂತರದಲ್ಲಿ ಏಕಪಕ್ಷೀಯವಾಗಿ ಸೋಲಿಸಿದೆ.

- Advertisement -

13ನೇ ಆವೃತ್ತಿಯ ಸ್ಯಾಫ್ ಟೂರ್ನಿಯಲ್ಲಿ 12ನೇ ಬಾರಿಗೆ ಫೈನಲ್ ಫೈಟ್’ಗಿಳಿದಿದ್ದ ಭಾರತ 8ನೇ ಟ್ರೋಫಿ ಗೆಲ್ಲುವ ಮೂಲಕ ದಕ್ಷಿಣ ಏಷ್ಯಾ ವಲಯದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು.

ಸಮಬಲದ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಸಾಕಷ್ಟು ಬೆವರು ಸುರಿಸಿದರೂ, ಗೋಲ್ ಬಲೆಯನ್ನು ತಲುಪಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯದ ದ್ವಿತೀಯಾರ್ಧದ ಆರಂಭವಾದ ಕೆಲವೇ ನಿಮಿಷಗಳಲ್ಲಿ ನಾಯಕ ಸುನಿಲ್ ಛೆಟ್ರಿ ಗಳಿಸಿದ ಸುಂದರವಾದ ಗೋಲಿನ ಮೂಲಕ ಭಾರತ ಪಂದ್ಯದಲ್ಲಿ ಖಾತೆ ತೆರೆಯಿತು. 49ನೇ ನಿಮಿಷದಲ್ಲಿ ಛೆಟ್ರಿ ಗೋಲು ದಾಖಲಿಸಿದ ಮರು ನಿಮಿಷದಲ್ಲೇ, ಗೋಲು ಬಲೆಯನ್ನು ಗುರಿಯಾಗಿಸಿ ಸುರೇಶ್ ನಡೆಸಿದ ಮುನ್ನಡೆ ಪ್ರಯತ್ನ ಯಶಸ್ಸು ಕಂಡಿತು. ಆ ಮೂಲಕ ಭಾರತ 2-0 ಗೋಲುಗಳ ಅಂತರದಿಂದ ಗೆಲುವಿನ ಕಡೆಗೆ ಹೆಜ್ಜೆಹಾಕಿತ್ತು. ಬಳಿಕ 90ನೇ ನಿಮಿಷದಲ್ಲಿ ಕೇರಳದ ಸಹಲ್ ಅಬ್ದುಲ್ ಸಮದ್ ಭಾರತದ ಮುನ್ನಡೆಯನ್ನು ಮೂರಕ್ಕೆ ಏರಿಸಿದರು.

Join Whatsapp