ಟೀಮ್ ಇಂಡಿಯಾದ ವಿಶ್ವ ದಾಖಲೆಯ ಗೆಲುವಿಗೆ ಅಡ್ಡಿಯಾದ ಮಿಲ್ಲರ್, ಡಸ್ಸೆನ್ !

Prasthutha|

ಸವಾಲಿನ ಮೊತ್ತ ಎದುರಿದ್ದರೂ ಎದೆಗುಂದದ ಪ್ರವಾಸಿ ದಕ್ಷಿಣ ಆಫ್ರಿಕಾ, ಟಿ- ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 7 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿಯೇ ಮಣಿಸಿದೆ. ಸತತ 13ನೇ ಪಂದ್ಯದ ಗೆಲುವಿನ ದಾಖಲೆಯ ನಿರೀಕ್ಷೆಯಲ್ಲಿದ್ದ ರಿಷಭ್ ಪಂತ್ ಪಡೆಗೆ ವಾನ್ಡರ್ ಡಸ್ಸೆನ್ – ಮಿಲ್ಲರ್ ಜೋಡಿ ಮುಟ್ಟಿನೋಡಿಕೊಳ್ಳುವಂತಹ ಸೋಲಿನ ರುಚಿ ಉಣಿಸಿದೆ.  

- Advertisement -

ದೆಹಲಿಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ, ಇಶಾನ್ ಕಿಶನ್ ಗಳಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ 4 ವಿಕೆಟ್ ನಷ್ಟದಲ್ಲಿ 211 ರನ್‌ಗಳಿಸಿತ್ತು. ದೊಡ್ಡ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮೂರು ವಿಕೆಟ್ ನಷ್ಟದಲ್ಲಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. 

ಆರಂಭಿಕರಾದ ಕ್ವಿಂಟನ್ ಡಿ ಕಾಕ್ (22) ಮತ್ತು ನಾಯಕ ತೆಂಬಾ ಬವುಮಾ 10 ರನ್‌ಗಳಿಸಿ ನಿರ್ಗಮಿಸಿದ್ದರು. ಮೂರನೇ ಕ್ರಮಾಂಕದಕಲ್ಲಿ ಬಂದ ಪ್ರಿಟೋರಿಯಸ್ 29 ರನ್‌ಗಳಿಸಿದ್ದ ವೇಳೆ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಭಾರತದ ಪಾಳಯದಲ್ಲಿ ಗೆಲುವಿನ ಭರವಸೆ ಮೂಡಿತ್ತು. ಆದರೆ ನಂತರ ಜೊತೆಯಾದ ವಾನ್ಡರ್ ಡಸ್ಸೆನ್ ಮತ್ತು ಕಿಲ್ಲರ್ ಖ್ಯಾತಿಯ ಡೇವಿಡ್ ಮಿಲ್ಲರ್ ಜೋಡಿ ಶತಕದ ಜೊತೆಯಾಟವಾಡುವ ಮೂಲಕ ಭಾರತದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 

- Advertisement -

46 ಎಸೆತಗಳನ್ನು ಎದುರಿಸಿದ ವಾನ್ಡರ್ ಡಸ್ಸೆನ್ 5 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 75 ರನ್, ಮತ್ತು 31 ಎಸೆತಗಳನ್ನು  ಎದುರಿಸಿದ ಡೇವಿಡ್ ಮಿಲ್ಲರ್ 5 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 64 ರನ್‌ಗಳಿಸಿ ಅಜೇಯರಾಗುಳಿದರು. 

ಈ ಗೆಲುವಿನ ಮೂಲಕ ಭಾರತದ ನೆಲದಲ್ಲಿ, ಟೀಮ್ ಇಂಡಿಯಾ ವಿರುದ್ಧದ ತಮ್ಮ ದಾಖಲೆಯನ್ನು ಆಫ್ರಿಕಾ ಮತ್ತಷ್ಟು ಉತ್ತಮಪಡಿಸಿಕೊಂಡಿದೆ. ಇದಕ್ಕೂ ಮೊದಲು ಭಾರತದಲ್ಲಿ ಆಡಿದ್ದ 4 ಪಂದ್ಯಗಳಲ್ಲಿ. ಮೂರರಲ್ಲೂ ಆಫ್ರಿಕಾ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ಐದು ಪಂದ್ಯಗಳ ಸರಣಿಯಲ್ಲಿ ಸೋಲಿನ ಆರಂಭ ಪಡೆದಿರುವ ಭಾರತಕ್ಕೆ ವಿಶ್ವ ದಾಖಲೆಯ ಅಮೂಲ್ಯ ಅವಕಾಶ ಕೈತಪ್ಪಿದೆ. ಸರಣಿಯ ಎರಡನೇ ಪಂದ್ಯ ಜೂನ್ 12 ರಂದು ಒಡಿಶಾದ ಕಟಕ್‌ನಲ್ಲಿ ನಡೆಯಲಿದೆ.



Join Whatsapp