ಗುವಾಹಟಿ: ಟೀಮ್ ಇಂಡಿಯಾ- ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ನಿರ್ಣಾಯಕ ಎರಡನೇ ಪಂದ್ಯ ಭಾನುವಾರ ಗುವಾಹಟಿಯಲ್ಲಿ ನಡೆಯಲಿದೆ. ಸರಣಿಯ ಮೊದಲನೇ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿರುವ ರೋಹಿತ್ ಶರ್ಮಾ ಬಳಗ, ಇಂದಿನ ಪಂದ್ಯವನ್ನು ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ.
ಆದರೆ ಭಾರತದ ನೆಲದಲ್ಲಿ ಒಮ್ಮೆಯೂ ಟಿ20 ಸರಣಿ ಬಿಟ್ಟುಕೊಡದ ಹರಿಣಗಳು ಸಮಬಲದ ಗೆಲುವಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿದೆ.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೋ-ಆಫ್ರಿಕಾ ಕದನ ನಡೆಯಲಿದ್ದು, ಪಂದ್ಯದ ಟಿಕೆಟ್‌ಗಳೆಲ್ಲವೂ ಈಗಾಗಲೇ ಸೋಲ್ಡ್ ಔಟ್ ಆಗಿದೆ.
ಈ ಮೈದಾನದಲ್ಲಿ ಟೀಮ್ ಇಂಡಿಯಾ ಇದುವರೆಗೂ ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದೆ.
ಮೊದಲನೇ ಪಂದ್ಯ ಮಳೆಯಿಂದಾಗಿ ಫಲಿತಾಂಶ ಕಾಣದೇ ರದ್ದಾಗಿತ್ತು. ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಹೆ ಎಂಟು ವಿಕೆಟ್‌ಗಳಿಂದ ಭಾರತ ಶರಣಾಗಿತ್ತು.
ಭಾರತದ ಬ್ಯಾಟಿಂಗ್ ಬಲಿಷ್ಠವಾಗಿದೆ. ರಾಹುಲ್-ಕೊಹ್ಲಿ-ಸೂರ್ಯಕುಮಾರ್ ಬ್ಯಾಟ್ ನಿಂದ ಉತ್ತಮ ರನ್ ಬರುತ್ತಿದೆ. ಆದರೆ ಬೌಲಿಂಗ್ ವಿಭಾಗದ ಸಮಸ್ಯೆಗೆ ಇನ್ನೂ ಪರಿಹಾರ ಕಂಡುಕೊಳ್ಳಲು ಆಗಿಲ್ಲ.
ಬೆನ್ನುನೋವಿನಿಂದ ತಂಡದಿಂದ ಹೊರನಡೆದಿರುವ ಬುಮ್ರಾ ಸ್ಥಾನದಲ್ಲಿ ಮುಹಮ್ಮದ್ ಸಿರಾಜ್ ಆಡುವ ಸಾಧ್ಯತೆ ಇದೆ. ಆದರೆ ಕಳೆದ 5 ವರ್ಷಗಳಲ್ಲಿ ಕೇವಲ 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಷ್ಟೇ ಸಿರಾಜ್, ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚಿನ ಬೌಲಿಂಗ್ ನಡೆಸಿದ್ದ ಅರ್ಷದೀಪ್ ಸಿಂಗ್ ಮತ್ತು ದೀಪಕ್ ಚಹಾರ್ ಭಾನುವಾರದ ಪಂದ್ಯದಲ್ಲೂ ಅದೇ ಲಯ ಕಂಡುಕೊಂಡರೆ ಭಾರತದ ಗೆಲುವು ಸುಲಭವಾಗಲಿದೆ.
ಮತ್ತೊಂದೆಡೆ ವಿಶ್ವಕಪ್ ಗೆ ಪ್ರಕಟಿಸಲಾಗಿರುವ ತಂಡದ ಜೊತೆ ಭಾರತಕ್ಕೆ ಬಂದಿಳಿದಿರುವ ಆಫ್ರಿಕಾ, ಮೊದಲ ಪಂದ್ಯದಲ್ಲಿ ಆಡಿದ್ದ ಹನ್ನೊಂದರ ಬಳಗವನ್ನೇ, ಗುವಾಹಟಿಯಲ್ಲೂ ಆಡಿಸುವ ನಿರೀಕ್ಷೆ ಇದೆ.
ಸಂಜೆ 7 ಗಂಟೆಗೆ ಪಂದ್ಯ ಪ್ರಾರಂಭವಾಗಲಿದ್ದು, ಟಾಸ್ 6.30ಕ್ಕೆ ನಡೆಯಲಿದೆ.